ಕಾಡಾನೆ ದಾಳಿಗೆ ಕಾರ್ಮಿಕ ಬಲಿ

1 Min Read
ಕಾಡಾನೆ ದಾಳಿಗೆ ಕಾರ್ಮಿಕ ಬಲಿ
ಚಿಕ್ಕಮಗಳೂರು ತಾಲೂಕು ಕೆ.ಆರ್.ಪೇಟೆ ಸಮೀಪದ ಕಂಚೇನಹಳ್ಳಿ ಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮೃತಪಟ್ಟ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಶವಗಾರದೆ ಇದ್ದರೂ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘದ ಕಾರ್ಯಕರ್ತರು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಚಿಕ್ಕಮಗಳೂರು: ಕಾಡಾನೆ ದಾಳಿಗೆ ತಮಿಳುನಾಡು ಮೂಲದ ಕಾರ್ಮಿಕ ನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕೆ.ಆರ್.ಪೇಟೆ ಸಮೀಪದ ಕಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶ್ರೀಧರ್ ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ ಕಾರ್ಮಿಕ.

ಕಂಚೇನಹಳ್ಳಿ ಗ್ರಾಮದ ರಮೇಶ್ ಎಂಬುವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಒಂಟಿ ಸಲಗ ದಾಳಿ ಮಾಡಿದೆ. ಆಗ ತಾನೆ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದಾರೆ. ಆದರೆ ಶ್ರೀಧರ್ ಆನೆ ಬರುತ್ತಿದ್ದ ಕಡೆಗೆ ಓಡಿದ್ದರಿಂದಾಗಿ ಆನೆಗೆ ಸಿಕ್ಕಿಕೊಂಡಿದ್ದಾರೆ. ಹೀಗೆ ಆನೆ ದಾರಿಗೆ ಅಡ್ಡಸಿಕ್ಕ ಶ್ರೀಧರ್ ಅವರನ್ನು ಆನೆ ತುಳಿದು ಸಾಯಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಶ್ರೀಧರ್ ಮೂಲತಃ ತಮಿಳುನಾಡು ಮೂಲದವರಾಗಿದ್ದು ಕೂಲಿ ಕೆಲಸ ಅರಸಿ ಕಾಫಿ ನಾಡಿಗೆ ಬಂದಿದ್ದರು ಅವರು ತಾಲೂಕಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತಿದ್ದರು. ಮೃತರಿಗೆ ಪತ್ನಿ, ಐದು ಮಂದಿ ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ.

ಶವಾಗಾರದ ಎದುರು ಪ್ರತಿಭಟನೆ
ಕಾಡಾನೆ ದಾಳಿಯಿಂದ ಕಾರ್ಮಿಕ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಶವಗಾರದ ಎದುರು ಜಮಾಯಿಸಿದ ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘದ ಕಾರ್ಯಕರ್ತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.
ಮೃತ ಕಾರ್ಮಿಕನ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಜೊತೆಗೆ ಆತನ ಕುಟುಂಬದ ಓರ್ವರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಚಿಕ್ಕಮಗಳೂರು ಹಾಗೂ ಮೂಡಿಗೆರೆ ಭಾಗದಲ್ಲಿ ಕಾಡಾನೆ ದಾಳಿ ದಿನೇದಿನೇ ಹೆಚ್ಚಾಗಲಾರಂಭಿಸಿದೆ. ಕಾರ್ಮಿಕರು ಜೀವಭಯದಲ್ಲಿಯೇ ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಕಾಡಾನೆಗಳನ್ನು ಓಡಿಸದೆ ನಿರ್ಲಕ್ಷ ವಹಿಸುತ್ತಿದ್ದಾರೆ. ಇನ್ನು ಮೂರು ದಿನಗಳ ಒಳಗಾಗಿ ಕಾಡಾನೆ ಓಡಿಸದಿದ್ದಲ್ಲಿ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಡಿಎಸ್ಎಸ್ ಮುಖಂಡರಾದ ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಹುಣಸೆಮಕ್ಕಿ ಲಕ್ಷ್ಮಣ್, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮತ್ತಿತರರಿದ್ದರು.

See also  ಸಂವಿಧಾನ,ಪ್ರಜಾಪ್ರಭುತ್ವ ರಕ್ಷಣೆ ಮುಸ್ಲಿಮರ ಗುರಿ
Share This Article