ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಯಾರ‍್ಯಾರು ಬೆಂಬಲ ಸೂಚಿಸಿದ್ದಾರೆ?

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 8 ಮತ್ತು 9 ರಂದು ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಯಾರು ಬೆಂಬಲ ವ್ಯಕ್ತಪಡಿಸಿದ್ದಾರೆ? ಯಾರು ದೂರ ಉಳಿಯಲಿದ್ದಾರೆ? ರಾಜ್ಯ ಸರ್ಕಾರದ ನಿಲುವೇನು ಎಂಬುದರ ಮಾಹಿತಿ ಹೀಗಿದೆ…

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇದರಲ್ಲಿ ರೈತ ಸಂಘಟನೆಗಳು ಕೂಡ ಕೈಜೋಡಿಸಲಿದೆ ಎಂದು ಹೇಳಲಾಗಿದೆ.

ಯಾರ ಬೆಂಬಲವಿದೆ?
ಎಫ್​.ಕೆ.ಎ.ಆರ್​.ಡಿ.ಯು ಸಂಘಟನೆ, ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್​, ಎಲ್​ಐಸಿ ಏಜೆಂಟ್ಸ್ ಆರ್ಗನೈಸೇಷನ್ ಆಫ್ ಇಂಡಿಯಾ, ಐ.ಎನ್​.ಟಿ.ಯು.ಸಿ, ಎ.ಐ.ಟಿ.ಯು.ಸಿ, ಸಿ.ಐ.ಟಿ.ಯು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಪ್ರತಿಭಟನೆಗೆ ಬೆಂಬಲ ನೀಡಲಿದ್ದಾರೆ ಎನ್ನಲಾಗಿದೆ.

ರಾಜ್ಯ ಸರ್ಕಾರ ಬೆಂಬಲ?
ಕೇಂದ್ರದ ವಿರುದ್ಧ ಕರೆ ನೀಡಿರುವ ಬಂದ್​ಗೆ ರಾಜ್ಯ ಸರ್ಕಾರದ ಬೆಂಬಲವಿದೆ ಎಂದು ಸಾರಿಗೆ ಸಚಿವ ತಮ್ಮಣ್ಣ ಪರೋಕ್ಷವಾಗಿ ಹೇಳಿದ್ದಾರೆ. ಕಾರ್ಮಿಕರ ಹಿತದೃಷ್ಟಿಯಿಂದ ಅಖಿಲ ಭಾರತ ಬಂದ್ ಮಾಡಲಾಗುತ್ತಿದೆ. ನೌಕರರ ಬಂದ್​ಗೆ ನಾವು ಸಹಕಾರ ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ನಾಳೆ ಕೆ.ಆಸ್.ಆರ್.ಟಿ.ಸಿ. ಬಸ್ ಇರೋದಿಲ್ಲ. ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರಕ್ಕೆ ಅನುವು ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಮ್ಮಣ್ಣ ಅವರು ಮಂಡ್ಯದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಬೇಡಿಕೆಗಳು ಏನೇನು?
1. ಬೆಲೆ ಏರಿಕೆ ತಡೆ ಹಾಗೂ ಉದ್ಯೋಗ ಸೃಷ್ಟಿ
2. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗಧಿ
3. ಕಾರ್ಪೋರೇಟ್ ಕಂಪನಿಗಳ ಪರ ಕಾರ್ಮಿಕ ಕಾನೂನು ತಿದ್ದುಪಡಿಗೆ ವಿರೋಧ
4. ಮೋಟರ್ ವಾಹನ ಮಸೂದೆ 2017 ವಿರೋಧಿಸಿ
5. ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧ – ಸಮಾನ ಕೆಲಸಕ್ಕೆ ಸಮಾನ ವೇತನ
6. ಅಂಗನವಾಡಿ , ಬಿಸಿಯೂಟ ಹಾಗೂ ಆಶಾ ನೌಕರರ ಖಾಯಂಮಾತಿಗೆ ಒತ್ತಾಯ.
7. ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತೆ ಹಾಗೂ 6 ಸಾವಿರ ಮಾಸಿಕ ನಿವೃತ್ತಿ ವೇತನ
8. 18 ಸಾವಿರ ಕನಿಷ್ಠ ವೇತನಕ್ಕೆ ಒತ್ತಾಯ.
9. ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆ

ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ
ನಾಳೆ ರಾಷ್ಟ್ರವ್ಯಾಪಿ ಮುಷ್ಕರ ಹಿನ್ನಲೆಯಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಅಧಿಕೃತವಾಗಿ ಶಿಕ್ಷಣ ಇಲಾಖೆ ರಜೆ ಘೋಷಣೆ ಮಾಡಿಲ್ಲ. ರಜೆ ಘೋಷಣೆ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳಿಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಣೆ‌ ಮಾಡಲಿದ್ದಾರೆ.

ಖಾಸಗಿ ಶಾಲಾ-ಕಾಲೇಜಿಗೆ ರಜೆ
ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲ ಇಲ್ಲದಿದ್ದರು ಮುಂಜಾಗೃತಾ ಕ್ರಮವಾಗಿ ಖಾಸಗಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. 8 ಮತ್ತು 9 ರಂದು ರಜೆ ನೀಡಲು ಖಾಸಗಿ ಶಾಲಾ ಒಕ್ಕೂಟ ನಿರ್ಧರಿಸಿರುವುದಾಗಿ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ್ದಾರೆ.

ಎಂದಿನಂತೆ ಓಲಾ, ಉಬರ್ ಸಂಚಾರ
ಬೆಂಗಳೂರಿನಲ್ಲಿ ಎಂದಿನಂತೆ ಓಲಾ ಮತ್ತು ಉಬರ್ ಸಂಚಾರ ಮಾಡಲಿದೆ ಎಂದು ಓಲಾ, ಉಬರ್ ನೌಕರರ ಸಂಘಟನೆಗಳ ಅಧ್ಯಕ್ಷ ತನ್ವೀರ್ ಮಾಹಿತಿ ನೀಡಿದ್ದಾರೆ. ಆದರೆ, ಮುಷ್ಕರಕ್ಕೆ ನೈತಿಕ ಬೆಂಬಲ ಸೂಚಿಸುವುದಾಗಿ ಹೇಳಿದರು.

ಬ್ಯಾಂಕ್ ವಹಿವಾಟು ವ್ಯತ್ಯಯ ಸಾಧ್ಯತೆ
ರಾಷ್ಟ್ರವ್ಯಾಪಿ ಮುಷ್ಕರ್​​​ಕ್ಕೆ ಬ್ಯಾಂಕ್​ ನೌಕರ ಸಂಘ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ 2 ದಿನ ಬ್ಯಾಂಕ್ ವಹಿವಾಟುವಿನಲ್ಲಿ ವ್ಯತ್ಯಯ ಆಗುವ ಸಾಧ್ಯತೆಯಿದೆ. ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ಬ್ಯಾಂಕ್​ ನೌಕರರ ಸಂಘದ ಜಂಟಿ ಕಾರ್ಯದರ್ಶಿ ನಾಗರಾಜ್ ಮಾಹಿತಿ ನೀಡಿದ್ದಾರೆ.

ಎಂದಿನಂತೆ ಖಾಸಗಿ ಬಸ್​ಗಳ ಸಂಚಾರ
ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಖಾಸಗಿ ಬಸ್​ ಒಕ್ಕೂಟ ಬೆಂಬಲ ನೀಡಿಲ್ಲ. ಎಂದಿನಂತೆ ರಾಜ್ಯದಲ್ಲಿ ಖಾಸಗಿ ಬಸ್​ಗಳ ಸಂಚಾರ ಇರಲಿದೆ. ದಿನನಿತ್ಯದ ವ್ಯವಹಾರಕ್ಕೆ ಇದರಿಂದ ತೊಂದರೆಯಾಗುತ್ತದೆ. ಮುಷ್ಕರಕ್ಕೆ ಕೇವಲ ನೈತಿಕ ಬೆಂಬಲ ನೀಡುತ್ತೇವೆ ಎಂದು ಬಸ್​ ಮಾಲೀಕರ ಸಂಘದ ಅಧ್ಯಕ್ಷ ಬಲ್ಲಾಳ ದಿಗ್ವಿಜಯ ನ್ಯೂಸ್​ ಸ್ಪಷ್ಟನೆ ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)