ರಾಜಧಾನಿಯಲ್ಲಿ ಭಾರತ್​ ಬಂದ್​ ಬಿಸಿ ಹೇಗಿದೆ?

ಬೆಂಗಳೂರು: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ರಾಜ್ಯ ರಾಜಧಾನಿಯಲ್ಲಿ ಯಾವ ರೀತಿ ಬೆಂಬಲ ವ್ಯಕ್ತವಾಗುತ್ತಿದೆ? ಎಲ್ಲೆಲ್ಲಿ ಬಂದ್​ ಬಿಸಿ ತಟ್ಟಿದೆ ಮತ್ತು ಪ್ರತಿಭಟನೆ ಎಲ್ಲಿ ನೀರಸವಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಬೆಂಗಳೂರಿಗೆ ಬಂದ್​ ಬಿಸಿ ಅಷ್ಟಾಗಿ ತಟ್ಟಿಲ್ಲ. ಎಂದಿನಂತೆ ಮೆಜೆಸ್ಟಿಕ್​ಕಡೆ ಬಿಎಂಟಿಸಿ ಬಸ್​ಗಳು ಸಂಚಾರ ಆರಂಭಿಸಿವೆ. ಆದರೆ, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ವಿರಳವಾಗಿದೆ. ನಮಗೆ ಅಧಿಕೃತವಾಗಿ ಇಲಾಖೆಯಿಂದ ಮಾಹಿತಿ ಬಂದಿಲ್ಲ ಎಂದು ಬಿಎಂಟಿಸಿ ಚಾಲಕರು ತಿಳಿಸಿದ್ದು, ಪರಿಸ್ಥಿತಿ ನೋಡಿ ಕಾರ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜಿಗಣಿ, ಅತ್ತಿಬೆಲೆ ಮತ್ತು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತ ಚಳಿಯಿಂದಾಗಿ ಪ್ರತಿಭಟನಾಕಾರರು ಇನ್ನೂ ರಸ್ತೆಗೆ ಇಳಿದಿಲ್ಲ.

ಬಸ್​ ಮೇಲೆ ಕಲ್ಲು ಎಸೆತ
ಮಂಗಳವಾರ ಬೆಳಗ್ಗೆ 6.18ರ ಸಮಯದಲ್ಲಿ‌‌ ಬೆಂಗಳೂರಿನ ಮಲ್ಲೇಶ್ವರಂನ 8ನೇ ಕ್ರಾಸ್​​ನಲ್ಲಿ ಬಿಎಂಟಿಸಿ ಬಸ್​​​ಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪೀಣ್ಯದಿಂದ ಮೆಜೆಸ್ಟಿಕ್ ಮಾರ್ಗವಾಗಿ ಬರುತಿದ್ದ 252 ನಂಬರಿನ ಬಸ್ ಮೇಲೆ ಕಲ್ಲು ಎಸೆಯಲಾಗಿದೆ.

ಎಂದಿನಂತೆ ಕೆ.ಆರ್​.ಮಾರ್ಕೆಟ್​ ತುಂಬಿ ತುಳುಕುತ್ತಿದೆ
ನಗರದ ಕೇಂದ್ರ ಬಿಂದುವಾದ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಬಂದ್ ಪರಿಣಾಮ ಬೀರಿಲ್ಲ. ಎಂದಿನಂತೆಯೇ ಮಾರುಕಟ್ಟೆಗೆ ವಿವಿಧ ಹೂವು, ಹಣ್ಣುಗಳು ಹಾಗೂ ತರಕಾರಿಗಳು ಬರುತ್ತಿರುವೆ. ಸಾಮಾನ್ಯ ದಿನಗಳಲ್ಲಿ ಜನಗಳಿರುವಂತೆಯೇ ಇಂದು ಕೂಡ ಮಾರುಕಟ್ಟೆಯಲ್ಲಿ ಜನಜಂಗುಳಿ ಇದೆ.

ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸಂಚಾರ ಆರಂಭ
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸಂಚಾರ ಆರಂಭವಾಗಿದೆ. ಕೆ.ಎಸ್​.ಆರ್​.ಸಿ. ಡಿಪೋ ಮ್ಯಾನೇಜರ್ ಆದೇಶದ ಮೇರೆಗೆ ಚಾಲಕರು ನಿಲ್ದಾಣಕ್ಕೆ ಬಸ್​ಗಳನ್ನ ತಂದಿದ್ದಾರೆ. ವಿರಾಜಪೇಟೆ, ಮೈಸೂರು ಹಾಗೂ ಕೊಳ್ಳೇಗಾಲಕ್ಕೆ ತೆರಳುವ ಬಸ್​ಗಳ ಸಂಚಾರ ಆರಂಭವಾಗಿದೆ.

ಎಂದಿನಂತೆ ಆಟೋ ಸಂಚಾರ ಹಾಗೂ ಓಲಾ, ಉಬರ್​ ಕ್ಯಾಬ್ ಸೇವೆಗಳು ಆರಂಭವಾಗಿದೆ. ಸದ್ಯ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 10 ಗಂಟೆಯ ನಂತರ ಬಂದ್​ ಸ್ವಲ್ಪ ಚುಕುರು ಪಡೆಯಬಹುದು ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ಮುಷ್ಕರ ಗಂಭೀರ