ರಾಜಧಾನಿಯಲ್ಲಿಲ್ಲ 2ನೇ ದಿನದ ರಾಷ್ಟ್ರವ್ಯಾಪಿ ಮುಷ್ಕರದ ಎಫೆಕ್ಟ್​: ಎಂದಿನಂತೆ ಜನಜೀವನ ಆರಂಭ

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದ ಎರಡನೇ ದಿನವಾದ ಇಂದು ರಾಜ್ಯ ರಾಧಾನಿಯಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಗಿದೆ.

ಎಂದಿನಂತೆ ಬಸ್​ ಸಂಚಾರ ಆರಂಭವಾಗಿದ್ದು, ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ನಿನ್ನೆಯಂತೆ ಆಟೋ, ಕ್ಯಾಬ್​, ಓಲಾ ಹಾಗೂ ಉಬರ್​ ಸಂಚಾರ ನಡೆಸುತ್ತಿವೆ. ಎಂದಿನಂತೆ ಅಂಗಡಿ ಮುಂಗಟ್ಟಗಳು ಸಹ ತೆರೆದಿವೆ. ಸದಾ ಜನರಿಂದ ತುಂಬಿ ತುಳುಕುವ ನಗರದ ಕೇಂದ್ರ ಭಾಗವಾದ ಕೃಷ್ಣ ರಾಜೇಂದ್ರ ಮಾರುಕಟ್ಟೆಯೂ ಕೂಡ ಮಾಮೂಲಿಯಂತೆ ಜನ ದಟ್ಟಣೆಯಿಂದ ಕೂಡಿದೆ. ಇತ್ತ ಜನರು ಕೂಡ ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಆದರೆ, ಕಾರ್ಮಿಕ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಿದ್ದು ಪೊಲೀಸ್​ ಬಿಗಿ ಬಂದೋಬಸ್ತ್​ ಅನ್ನು ಒದಗಿಸಲಾಗಿದೆ. ಮೆಜಿಸ್ಟಿಕ್​ ಬಳಿ ಪಶ್ಚಿಮ ವಿಭಾಗದ ಪೊಲೀಸರಿಂದ ಹೆಚ್ಚುವರಿ ಭದ್ರತೆ ಏರ್ಪಡಿಸಲಾಗಿದ್ದು, ಒಂದು ಕೆಎಸ್ಆರ್​ಪಿ ತುಕಡಿಯನ್ನು ನಿಯೋಜಿಸಲಾಗಿದೆ. (ದಿಗ್ವಿಜಯ ನ್ಯೂಸ್​)