More

    ನಿವೇಶನ ರಹಿತರಿಗೆ ಶೀಘ್ರ ಮನೆ

    ಬೆಳ್ತಂಗಡಿ: ತಾಲೂಕಿನಲ್ಲಿ ಅದೆಷ್ಟೋ ಕುಟುಂಬಗಳು ಮನೆ, ನಿವೇಶನ ಇಲ್ಲದೆ ಗುಡಿಸಲಿನಲ್ಲಿ ವಾಸವಾಗಿದ್ದು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ನಿವೇಶನವಾಗಲಿ, ಮನೆಯಾಗಲಿ ಮಂಜೂರಾಗಿಲ್ಲ. ನಮಗೆ ಸಿಗುವ ಸೌಲಭ್ಯ ತಕ್ಷಣವೇ ಒದಗಿಸಿ ಎಂದು ದಲಿತ ಮುಖಂಡ ನೇಮಿರಾಜ ಕಿಲ್ಲೂರು ಒತ್ತಾಯಿಸಿದರು.

    ಮಿನಿ ವಿಧಾನಸೌಧದಲ್ಲಿ ಶನಿವಾರ ತಹಸೀಲ್ದಾರ್ ಮಹೇಶ್ ಜಿ. ಅಧ್ಯಕ್ಷತೆಯಲ್ಲಿ ನಡೆದ ದಲಿತ ಕುಂದುಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು. ಮಳೆಹಾನಿ ಪ್ರದೇಶದಲ್ಲಿಯೂ ದಲಿತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ತಹಸೀಲ್ದಾರ್ ಪ್ರತಿಕ್ರಿಯಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಗ್ರಾಮ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಸಂಬಂಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ದಲಿತ ಮುಖಂಡರಾದ ಶೇಕರ್ ಕುಕ್ಕೇಡಿ, ಸಂಜೀವ ಆರ್. ಪ್ರಶ್ನಿಸಿದರು. ಉತ್ತರಿಸಿದ ತಹಸೀಲ್ದಾರ್, ಈಗಾಗಲೇ ೧೫ ಕಡೆ ಅಂಬೇಡ್ಕರ್ ಭವನ ನಿರ್ಮಿಸಲು ಜಾಗ ಗುರುತಿಸಿದ್ದು, ಮಂಜೂರಾತಿ ಹಂತಕ್ಕೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದರು.

    ಮಾತಿನ ಚಕಮಕಿ: ಅರಣ್ಯ ಪ್ರದೇಶದಲ್ಲಿರುವ ಸಾವಿರಾರು ದಲಿತ ಕುಟುಂಬಗಳಿಗೆ ಇನ್ನೂ ಮೂಲಸೌಕರ್ಯ, ನಿವೇಶನ ಮಂಜೂರಾಗಿಲ್ಲ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ, ವನ್ಯಜೀವಿ ವಿಭಾಗದ ಹೊಂದಾಣಿಕೆ ಕೊರತೆಯಿಂದ ಈ ರೀತಿಯಾಗುತ್ತಿದ್ದು ದಲಿತರನ್ನು ಮತ್ತು ಆದಿವಾಸಿಗಳನ್ನು ಕಡೆಗಣಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆನೀಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು. ಈ ಸಂದರ್ಭ ಅಧಿಕಾರಿಗಳು ಮತ್ತು ದಲಿತ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು.

    ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಸಮಾಜಕಲ್ಯಾಣ ಇಲಾಖಾ ಅಧಿಕಾರಿ ಹೇಮಚಂದ್ರ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ವಿಜಯವಾಣಿ ವರದಿ ಪ್ರತಿಧ್ವನಿ: ಸಭೆಯಲ್ಲಿ ಕಲ್ಮಂಜ, ಪಜಿರಡ್ಕ ಎಂಬಲ್ಲಿನ ದಲಿತ ಕುಟುಂಬಗಳ ಸಮಸ್ಯೆ ಕುರಿತು ವಿಜಯವಾಣಿ ವರದಿ ಬಗ್ಗೆ ಪ್ರಸ್ತಾಪಿಸಲಾಯಿತು. ಪತ್ರಿಕೆಗಳು ಇಂತಹ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುವುದಿಲ್ಲ. ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ದಲಿತ ಕುಟುಂಬಗಳಿಗೆ ಮನೆ, ನಿವೇಶನ ವಿದ್ಯುತ್ ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ತಹಸೀಲ್ದಾರ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts