ರಾಷ್ಟ್ರವ್ಯಾಪಿ ಮುಷ್ಕರ: ಕಿಡಿಗೇಡಿಗಳಿಂದ ಹಲವೆಡೆ ಸರ್ಕಾರಿ ಬಸ್​ಗಳ ಮೇಲೆ ಕಲ್ಲು ತೂರಾಟ, ಸಂಚಾರ ಸ್ತಬ್ಧ

ಬೆಂಗಳೂರು/ರಾಮನಗರ/ಬಳ್ಳಾರಿ: ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರದ ಎರಡನೇ ದಿನವಾದ ಇಂದು ಕೆಲವು ಕಿಡಿಗೇಡಿಗಳು ಸರ್ಕಾರಿ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಬುಧವಾರ ಬೆಳ್ಳಂಬೆಳಗ್ಗೆ ರಾಜಧಾನಿಯ ಡಿಪೋ ನಂ.28ರ ಐದು ವೋಲ್ವೋ ಬಸ್​ಗಳ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ. ಬಸ್​ನ ಗಾಜಿನ ಬಾಗಿಲು ಹಾಗೂ ಫ್ರೆಂಟ್ ಗ್ಲಾಸ್ ಒಡೆದು ಪುಡಿ ಪುಡಿಯಾಗಿದೆ.

ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನಿಂದ ಬೆಂಗಳೂರಿಗೆ ಬರುತ್ತಿದ್ದ ಐದು ಸರ್ಕಾರಿ ಬಸ್​ಗಳ ಮೇಲೆ ತಾವರೆಕೆರೆಗೆ ಬಳಿ ಕಲ್ಲುತೂರಾಟ ನಡೆದಿದೆ. ಬೆಳಗ್ಗೆ ಸಂಚಾರ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದರಿಂದಾಗಿ ಮಾಗಡಿಯಿಂದ ತೆರಳಬೇಕಿದ್ದ ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ಸಂಬಂಧ ತಾವರೆಕೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿಯ ಅಲಿಪುರ ಬಳಿ ಎರಡು ಕೆಎಸ್​ಆರ್​ಟಿಸಿ ಬಸ್​ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಳ್ಳಾರಿ-ಬೆಳಗಾವಿ ಹಾಗೂ ಸಿರುಗುಪ್ಪ-ಬೆಂಗಳೂರು ಬಸ್​ಗೆ ಹಾನಿಯುಂಟಾಗಿದ್ದು, ಡಿಪೋ ಮುಂಭಾಗದಲ್ಲಿ ಪ್ರತಿಭಟನೆಯಿಂದ ಸಂಚಾರ ಸ್ಥಗಿತವಾಗಿದೆ.

ಬಿಎಂಟಿಸಿ ಸ್ತಬ್ಧ
ಹಲವೆಡೆ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆದಿರುವುದರಿಂದ ಸಾರಿಗೆ ಸಂಸ್ಥೆಗೆ ನಷ್ಟವಾಗಿದೆ. ಸದ್ಯದ ಮಟ್ಟಿಗೆ ಬಿಎಂಟಿಸಿ ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪರಿಸ್ಥಿತಿ ತಿಳಿಗೊಂಡ ನಂತರ ಬಸ್ ಸಂಚಾರ ಆರಂಭಿಸಲಾಗುವುದು ಎಂದು ‘ದಿಗ್ವಿಜಯ ನ್ಯೂಸ್​’ಗೆ ಬಿಎಂಟಿಸಿ ಮುಖ್ಯ ಸಂಚಾರಿ ವ್ಯವಸ್ಥಾಪಕ ವಿಶ್ವನಾಥ್​​ ಮಾಹಿತಿ ನೀಡಿದ್ದಾರೆ.