ಹುಲಸೂರು: ನರೇಗಾದಿಂದ ಕುಟುಂಬವೊಂದಕ್ಕೆ ಕನಿಷ್ಠ ನೂರು ದಿನ ಕೂಲಿ ಕೆಲಸ ಒದಗಿಸಿ ಗ್ರಾಮೀಣ ಬಡವರಿಗೆ ಆರ್ಥಿಕ ಭದ್ರತೆ ಒದಗಿಸುವ ಗುರಿ ಹೊಂದಿದೆ. ಬಡವರ ಬವಣೆ ನೀಗಿಸಲು ಯೋಜನೆ ಸಹಕಾರಿ ಎಂದು ತಾಪಂ ಇಒ ವೈಜಣ್ಣ ಫುಲೆ ಹೇಳಿದರು.
ಪಟ್ಟಣದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡ ತಾಲೂಕು ಮಟ್ಟದ ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿ ಕಾರ್ಯಾದೇಶ ವಿತರಣಾ ಮೇಳದಲ್ಲಿ ಮಾತನಾಡಿ, ೨೦೨೪-೨೫ನೇ ಸಾಲಿನ ನರೇಗಾ ಐಇಸಿ ಕ್ರಿಯಾ ಯೋಜನೆಯ ಭಾಗವಾಗಿ ಈ ಮೇಳವನ್ನು ಆಯೋಜಿಸಲಾಗಿದೆ. ತಾಪಂ ವ್ಯಾಪ್ತಿಯ ಎಲ್ಲ ಗ್ರಾಪಂ ಗಳಲ್ಲಿನ ೨೦೨೪-೨೫ನೇ ಸಾಲಿನ ನರೇಗಾ ಅನುಮೋದಿತ ಕ್ರಿಯಾ ಯೋಜನೆಯಲ್ಲಿನ ೨೦ ಜನ ಫಲಾನುಭವಿಗಳಿಗೆ ವಿವಿಧ ಕಾಮಗಾರಿಗಳನ್ನು ಅನುಷ್ಠಾನಿಸಿಕೊಳ್ಳಲು ಈ ಮೇಳದಲ್ಲಿ ಕಾರ್ಯಾದೇಶ ವಿತರಿಸಲಾಗಿದೆ. ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ.) ಮಹಾದೇವ ಜಮ್ಮು ಮಾತನಾಡಿ, ತೋಟಗಾರಿಕೆ, ರೇಷ್ಮೆ, ಕೃಷಿ ಇತರೆ ಇಲಾಖೆಗಳ ಒಗ್ಗೂಡಿಸುವಿಕೆಯಡಿ ನರೇಗಾದಲ್ಲಿ ಬಹಳಷ್ಟು ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳು ಇವೆ. ಸಾರ್ವಜನಿಕರು ಅವುಗಳ ಲಾಭ ಪಡೆದುಕೊಳ್ಳಬೇಕು. ಗ್ರಾಪಂನಲ್ಲಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ತಲುಪಿಸುವುದು ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಆಗಿದೆ ಎಂದರು.
ಮಿರಖಲï ಗ್ರಾಪಂ ಅಧ್ಯಕ್ಷೆ ಸುವರ್ಣಾ ಮೇತ್ರೆ, ಉಪಾಧ್ಯಕ್ಷ ಸತ್ಯವಾನ, ತಾಪಂ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹಮ್ಮದ್ ಸಲೀಂ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರಮೇಶ ಮಿಲಿಂದಕರ, ಸಂದೀಪ ಬಿರಾದಾರ, ಸಿದ್ದಲಿಂಗ ಪದ್ಮಾ, ಬಸವರಾಜ ರೂಗಿ, ಪ್ರಮುಖರಾದ ನವೀನಕುಮಾರ,ಅಂಕುಶ ಭೂಸಾರೆ, ಸಂತೋಷ ಗಾಯಕವಾಡ, ನಾಗೇಶ ಮದ್ನೆ, ಗ್ರಾಮ ಕಾಯಕ ಮಿತ್ರರು, ತಾಪಂ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.
ನರೇಗಾ ತಾಲೂಕು ಐಇಸಿ ಸಂಯೋಜಕ ಗಣಪತಿ ಹಾರಕೂಡೆ ಸ್ವಾಗತಿಸಿ, ನಿರೂಪಣೆ ಮಾಡಿದರು.