ಬಾಳೆಹೊನ್ನೂರು: ವರ್ಷವಿಡೀ ದುಡಿಯುವ ಶ್ರಮಿಕ ವರ್ಗವನ್ನು ಗುರುತಿಸುವ ದಿನವೇ ಮೇ 1 ಕಾರ್ಮಿಕ ದಿನಾಚರಣೆಯಾಗಿದೆ ಎಂದು ಜೇಸಿಐ ಪೂರ್ವಾಧ್ಯಕ್ಷ ಎಚ್.ಗೋಪಾಲ್ ಹೇಳಿದರು.
ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಸಿದ್ದೇಶ್ವರ ಇಂಜಿನಿಯರಿಂಗ್ ವರ್ಕ್ಸ್‌ನಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಮಿಕ ವರ್ಗ ದೇಶದ ಪ್ರಬಲ ಶಕ್ತಿಯಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಒಂದು ದೇಶ ಹಾಗೂ ರಾಜ್ಯ ತನ್ನದೇ ಆದ ಮೂಲ ಸೌಕರ್ಯ, ಅಭಿವೃದ್ಧಿ ಹಾಗೂ ಆರ್ಥಿಕತೆಯಿಂದ ನಿರ್ಮಿಸಲ್ಪಡುತ್ತದೆ. ಕಾರ್ಮಿಕ ವರ್ಗ ದೇಶದ ಅಭಿವೃದ್ಧಿಯ ಬೇರುಗಳಾಗಿದ್ದಾರೆ ಎಂದರು.
ದೇಶ ಹಾಗೂ ವಿಶ್ವಕ್ಕೆ ಧನಾತ್ಮಕ ಬದಲಾವಣೆಗಳನ್ನು ಆರಂಭಿಸಲು ಮೂಲಭೂತಮಟ್ಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಯಾವುದೇ ದೇಶಕ್ಕೆ ಕಾರ್ಮಿಕ ವರ್ಗವೇ ಬೆನ್ನೆಲುಬಾಗಿರುವುದು ಮುಖ್ಯ. ಕಾರ್ಮಿಕ ವರ್ಗದ ಬಗ್ಗೆ ಆಯಾ ಸರ್ಕಾರಗಳು, ಜನರು ಕಾಳಜಿ ವಹಿಸಬೇಕಾಗಿದ್ದು, ಕಾರ್ಮಿಕರ ಯೋಗ ಕ್ಷೇಮದ ಬಗ್ಗೆ ನಿಗಾ ವಹಿಸಬೇಕಿದೆ ಎಂದರು.
ಜೇಸಿಐ ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಸತೀಶ್ ಅರಳೀಕೊಪ್ಪ, ಸುಧಾಕರ್, ಯಶವಂತ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀನ್, ಶೇಖರ್ ಇಟ್ಟಿಗೆ, ಸದಸ್ಯರಾದ ಪ್ರಕಾಶ್ ಮುದುಗುಣಿ, ಶಶಿಕಾಂತ್, ಉಪನ್ಯಾಸಕ ಸೋಮೇಶ್‌ಗೌಡ ಮತ್ತಿತರರು ಹಾಜರಿದ್ದರು.
