ಇಂದಿರಾ ಕ್ಯಾಂಟೀನ್​ನಲ್ಲಿ ಆಹಾರ ಸೇವಿಸಿದರೆ ವಾಂತಿ, ಭೇದಿ ಗ್ಯಾರಂಟಿ!

ಬೆಂಗಳೂರು: ಬಡ, ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಊಟ-ಉಪಹಾರ ಒದಗಿಸುವ ಚಿಂತನೆಯೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಹಳ್ಳ ಹಿಡಿದಿದ್ದು, ಇಲ್ಲಿ ಊಟ ಮಾಡಿದರೆ ವಾಂತಿ, ಭೇದಿಯಾಗಿ ಆರೋಗ್ಯ ಹದಗೆಡುವುದು ಖಾತ್ರಿ ಎಂದು ಬಿಬಿಎಂಪಿ ಕಾರ್ಪೊರೇಟರ್​ ಉಮೇಶ್​ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

ಉಮೇಶ್​ ಶೆಟ್ಟಿ ಅವರು ಜಯನಗರ, ಜೆ.ಪಿ. ನಗರ, ನಾಗಪುರ ವಾರ್ಡ್​ಗಳಲ್ಲಿ ಇಂದಿರಾ ಕ್ಯಾಂಟೀನ್​ನಲ್ಲಿ ವಿತರಿಸುವ ಆಹಾರದ ಸ್ಯಾಂಪಲ್​ ಅನ್ನು ಸಂಗ್ರಹಿಸಿ ಎಂ.ಎಸ್​. ರಾಮಯ್ಯ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಪರೀಕ್ಷೆಯಲ್ಲಿ ಇಂದಿರಾ ಕ್ಯಾಂಟೀನ್​ನ ಆಹಾರದಲ್ಲಿ ಬ್ಯಾಕ್ಟೀರಿಯಲ್​ ಕೌಂಟ್​ ಮತ್ತು ಫಂಗಸ್​ ಕೌಂಟ್​ ಹೆಚ್ಚಿರುವುದು ತಿಳಿದು ಬಂದಿದೆ. ಈ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಶೆಟ್ಟಿ ತಿಳಿಸಿದ್ದಾರೆ.

ಒಟ್ಟು 16 ಸಾವಿರ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್​ನಿಂದ ಊಟ ಪೂರೈಸಲಾಗುತ್ತಿದೆ. ಆದರೆ ಹಲವೆಡೆ ರಾತ್ರಿ ಉಳಿದ ಊಟವನ್ನು ಬೆಳಗ್ಗೆ ಪೌರ ಕಾರ್ಮಿಕರಿಗೆ ನೀಡಲಾಗುತ್ತಿದೆ. ಜತೆಗೆ ಗುತ್ತಿಗೆದಾರರು ಸ್ವಚ್ಛತೆ ಇಲ್ಲದೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಈ ಬಗ್ಗೆ ಎಸಿಬಿಗೆ ದೂರು ನೀಡುವ ಕುರಿತು ಚಿಂತಿಸುತ್ತಿದ್ದೇನೆ ಎಂದು ಉಮೇಶ್​ ಶೆಟ್ಟಿ ತಿಳಿಸಿದ್ದಾರೆ.