ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಬಿಜೆಪಿಯಲ್ಲಿ ಎಲ್​.ಕೆ.ಆಡ್ವಾಣಿಯವರೇ ಅತ್ಯುನ್ನತ ನಾಯಕ ಎಂದ ಶಿವಸೇನೆ

ಮುಂಬೈ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಲ್​.ಕೆ.ಆಡ್ವಾಣಿಯವರು ಸ್ಪರ್ಧಿಸದೇ ಇದ್ದರೂ ಅವರೇ ಬಿಜೆಪಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿ ಇರುತ್ತಾರೆ ಎಂದು ಶಿವಸೇನೆ ಇಂದು ಹೇಳಿದೆ.

ಲಾಲ್​ ಕೃಷ್ಣ ಆಡ್ವಾಣಿಯವರು ಭಾರತದ ರಾಜಕೀಯದಲ್ಲಿ ಭೀಷ್ಮಾಚಾರ್ಯ ಎಂದೇ ಪ್ರಸಿದ್ಧಿ ಪಡೆದವರು. ಆದರೆ, ಅವರ ಹೆಸರು ಲೋಕಸಭಾ ಚುನಾವಣೆಯ ಪಟ್ಟಿಯಲ್ಲಿ ಕಾಣಿಸದೆ ಇರುವುದು ಆಶ್ಚರ್ಯವೇನಲ್ಲ ಎಂದು ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಅಲ್ಲದೆ, ಆಡ್ವಾಣಿಯವರ ಯುಗ ಮುಕ್ತಾಯವಾಗುತ್ತಿದೆ. ಅವರು ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಗೆದ್ದಿದ್ದರು. ಈ ಬಾರಿ ಅಮಿತ್​ ಷಾ ಸ್ಪರ್ಧಿಸುತ್ತಿದ್ದಾರೆ. ಇದರ ಅರ್ಥ ಆಡ್ವಾಣಿಯವರಿಗೆ ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಾಯ ಮಾಡಲಾಗುತ್ತಿದೆ ಎಂಬುದೇ ಆಗಿದೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ಆಡ್ವಾಣಿಯವರು ಬಿಜೆಪಿಯ ಸಂಸ್ಥಾಪಕರಲ್ಲಿ ಒಬ್ಬರು. ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಜತೆಯಾಗಿ ಪಕ್ಷವನ್ನು ಮುನ್ನಡೆಸಿದ್ದಾರೆ. ಈಗ ನರೇಂದ್ರ ಮೋದಿ ಹಾಗೂ ಅಮಿತ್​ ಷಾಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಬಿಜೆಪಿಯವಲ್ಲಿ ಹಿರಿಯ ಮುಖಂಡರಿಗೆ ಯಾವುದೇ ಜವಾಬ್ದಾರಿಯನ್ನೂ ನೀಡದ ವಾತಾವರಣ ಈಗಾಗಲೇ ಸೃಷ್ಟಿಯಾಗಿದೆ ಎಂದು ಶಿವಸೇನೆ ತಿಳಿಸಿದೆ.

ಮೊನ್ನೆ ಬಿಡುಗಡೆಯಾದ ಲೋಕಸಭಾ ಬಿಜೆಪಿ ಪಟ್ಟಿಯಲ್ಲಿ ಗುಜರಾತ್​ನ ಗಾಂಧಿನಗರದಿಂದ ಅಮಿತ್​ ಷಾ ಅವರು ಅಭ್ಯರ್ಥಿ ಎಂದು ಹೇಳಲಾಗಿತ್ತು.