ಪಡಿತರ ಚೀಟಿ ಇ-ಕೆವೈಸಿ ಮತ್ತೆ ಶುರು

ವೇಣುವಿನೋದ್ ಕೆ.ಎಸ್. ಮಂಗಳೂರು
ರಾಜ್ಯದಲ್ಲಿನ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡುವ ಉದ್ದೇಶದನ್ವಯ ಆಹಾರ ಸುರಕ್ಷಾ ಅಭಿಯಾನ ಹಮ್ಮಿಕೊಂಡಿದ್ದು, ಅದರಂತೆ ಪಡಿತರ ಚೀಟಿಯ ಇ-ಕೆವೈಸಿ ಅಥವಾ ಆಧಾರ್ ದೃಢೀಕರಣ ಶುರು ಮಾಡಿದೆ. ಇದಕ್ಕಾಗಿ ಜನರು ಪಡಿತರ ಅಂಗಡಿ ಮುಂದೆ ಸಾಲು ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಬುಧವಾರದಿಂದಲೇ ಈ ಪ್ರಕ್ರಿಯೆ ಎಲ್ಲೆಡೆ ಶುರುವಾಗಿದ್ದು ನವೆಂಬರ್ ಅಂತ್ಯದ ವರೆಗೂ ನಡೆಯಲಿದೆ. ಈ ಮೂರು ತಿಂಗಳ ಅವಧಿಯಲ್ಲಿ ಆಧಾರ್ ದೃಢೀಕರಣ ಮಾಡದಿರುವ ಪಡಿತರದಾರರಿಗೆ ಆ ಬಳಿಕ ಪಡಿತರ ಹಂಚಿಕೆ ಸ್ಥಗಿತಗೊಳ್ಳಲಿದೆ. ಹಾಗೆಂದು ಹೆದರಬೇಕಾಗಿಲ್ಲ, ಮುಂದಿನ ದಿನಗಳಲ್ಲಿ ಇ-ಕೆವೈಸಿ ಮಾಡಿದರೆ ನಂತರದ ತಿಂಗಳಿನಿಂದ ಪಡಿತರ ವಿತರಣೆ ಮಾಡಬಹುದು ಎಂದು ಇಲಾಖೆ ತಿಳಿಸಿದೆ.
ಈ ಪ್ರಕ್ರಿಯೆ ಈ ಮೊದಲು ಜೂನ್‌ನಲ್ಲೇ ಶುರು ಮಾಡಿದ್ದರೂ ಕೃಷಿ ಸಾಲಮನ್ನಾದ ದಾಖಲೆಯ ಪ್ರಕ್ರಿಯೆ, ಮಳೆಗಾಲ ಸಹಿತ ವಿವಿಧ ಕಾರಣಗಳಿಂದಾಗಿ 15 ದಿನಗಳಲ್ಲೇ ಸ್ಥಗಿತಗೊಂಡಿತ್ತು, ಈಗ ಪ್ರಕ್ರಿಯೆ ಮತ್ತೆ ಶುರುವಾಗಿದೆ.

ನೂತನ ಆದೇಶದಂತೆ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ- ಕೆವೈಸಿ ಮಾಡಬೇಕು. ಕೆವೈಸಿ ಪದ್ಧತಿಯು ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ ಸರ್ವರ್ ಮೂಲಕ ಲಭ್ಯವಿರುತ್ತದೆ. ಸೈಬರ್ ಅಥವಾ ಇನ್ನಿತರ ಸೆಂಟರ್‌ಗಳಲ್ಲಿ ಇ-ಕೆವೈಸಿ ಲಭ್ಯವಿಲ್ಲ.

ಪಡಿತರ ಚೀಟಿಯಲ್ಲಿ ಹೆಸರಿರುವ ಕೆಲ ಸದಸ್ಯರು ವಿದೇಶದಲ್ಲಿದ್ದರೆ, ಅಥವಾ ನಿಧನರಾಗಿದ್ದರೆ ಅಂತಹ ಹೆಸರನ್ನು ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಲು ಅಸಾಧ್ಯವಾಗುತ್ತದೆ ಮತ್ತು ರೇಷನ್ ಕಡಿತವಾಗಲಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಮಾಡುವ ಇ-ಕೆವೈಸಿ ಪದ್ಧತಿಯನ್ನು ಆಹಾರ ಇಲಾಖೆ ಮೂಲಕವೇ ಅಪ್ಡೇಟ್ ಮಾಡಲಾಗುತ್ತದೆ, ಕುಟುಂಬ ಸದಸ್ಯರು ಆಹಾರ ಇಲಾಖೆಗೆ ಭೇಟಿ ನೀಡಬೇಕಾಗಿಲ್ಲ.
ಕೆವೈಸಿ ಮಾಡಲು ಕುಟುಂಬದ ಪ್ರತಿಯೊಂದು ಸದಸ್ಯರು ಹಾಜರಾಗಬೇಕು ಹಾಗೂ ಆಧಾರ್ ಬೆರಳಚ್ಚು (ಬಯೋಮೆಟ್ರಿಕ್) ಅಪ್ಡೇಟ್ ಆಗಿರಬೇಕು, ಇಲ್ಲವಾದಲ್ಲಿ ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಲು ಆಗುವುದಿಲ್ಲ. ಆಗಲಿಲ್ಲ ಎಂದಾದರೆ ಆಧಾರ್ ಕೇಂದ್ರಕ್ಕೆ ತೆರಳಿ ಬಯೋಮೆಟ್ರಿಕ್ ಮತ್ತೆ ಮಾಡಿ ಬಳಿಕ ಆ ಆಧಾರ್ ಅಪ್ಡೇಟ್ ಆದ ನಂತರ ಮತ್ತೆ ರೇಷನ್ ಅಂಗಡಿಗೆ ಬಂದು ಇ-ಕೆವೈಸಿ ಮಾಡಬಹುದು. ಇ-ಕೆವೈಸಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಡಿತರ ಚೀಟಿಯ ಇ-ಕೆವೈಸಿ ಪದ್ಧತಿಯು ಹೊಸ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರಿಗೂ ಅನ್ವಯವಾಗುವುದು. ಸಂಪೂರ್ಣ ಇ-ಕೆವೈಸಿ ಆಗಿದೆಯೇ-ಇಲ್ಲವೇ ತಿಳಿಯಲು ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಪಡಿತರ ಚೀಟಿ ಸಂಖ್ಯೆ ದಾಖಲಿಸಿ ಮಾಹಿತಿ ತಿಳಿಯಬಹುದು.

ಫೋಟೋ ಬದಲು:  ಕೆವೈಸಿ ಮಾಡಿದ ಬಳಿಕ ಪಡಿತರ ಚೀಟಿಯಲ್ಲಿನ ಹಳೆಯ ಪೋಟೋ ಆಧಾರ್ ಕಾರ್ಡ್‌ನಲ್ಲಿರುವ ಪೋಟೋಗೆ ಬದಲಾಗುವುದು ಹಾಗೂ ಪಡಿತರ ಚೀಟಿಯ ಮುಖ್ಯಸ್ಥ ಪುರುಷರಾಗಿದ್ದಲ್ಲಿ ಇ-ಕೆವೈಸಿ ಮಾಡಿದ ಬಳಿಕ ಸ್ತ್ರೀಯರಿಗೆ ವರ್ಗಾವಣೆಗೊಳ್ಳುತ್ತದೆ. ಸ್ತ್ರೀಯರು ಇಲ್ಲದ ಪಡಿತರ ಚೀಟಿಗೆ ಮಾತ್ರ ಪುರುಷ ಮುಖ್ಯಸ್ಥನಾಗಿರುತ್ತಾನೆ.

ಆದಾಯ ಮೀರಿದರೆ ಬಿಪಿಎಲ್ ರದ್ದು: ಪಡಿತರ ಚೀಟಿಯಲ್ಲಿ ಇ-ಕೆವೈಸಿ ಸಂದರ್ಭ ಕುಟುಂಬದ ಮುಖ್ಯಸ್ಥರ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ 1.20 ಲಕ್ಷ ರೂ. ಮೀರಿದರೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ರದ್ದು ಮಾಡಲಾಗುವುದು.

ಯಾರೂ ಗಡಿಬಿಡಿ ಮಾಡುವ ಅಗತ್ಯವಿಲ್ಲ. ನವೆಂಬರ್‌ವರೆಗೂ ಸಮಯವಿದೆ. ಕುಟುಂಬದ ಎಲ್ಲರೂ ಒಮ್ಮೆಲೇ ಹೋಗಿ ಬಯೋಮೆಟ್ರಿಕ್ ಕೊಡಬೇಕಿಲ್ಲ, ಲಭ್ಯ ಇರುವವರು ಹೋಗಿ ಕೊಡಬಹುದು. ಕೊಡದ ಸದಸ್ಯರ ಪಡಿತರ ನಿಗದಿತ ಅವಧಿಯ ನಂತರ ಕಡಿತಗೊಳ್ಳುತ್ತದೆ.
– ಸುನಂದಾ, ಸಹಾಯಕ ನಿರ್ದೇಶಕಿ, ಆಹಾರ ಇಲಾಖೆ, ಮಂಗಳೂರು

Leave a Reply

Your email address will not be published. Required fields are marked *