ಇಬ್ಬರು ಸಂತ್ರಸ್ತರು ಸ್ವದೇಶಕ್ಕೆ

ಮಂಗಳೂರು: ಕುವೈಟ್‌ನಲ್ಲಿ ಉದ್ಯೋಗ ವಂಚನೆಗೆ ಒಳಗಾಗಿ ಅತಂತ್ರ ಸ್ಥಿತಿಯಲ್ಲಿ ಇದ್ದ ಕರಾವಳಿಯ 34 ಸಂತ್ರಸ್ತ ನೌಕರರ ಪೈಕಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಓರ್ವರು ಸಹಿತ ಇಬ್ಬರಿಗೆ ಮಾತ್ರ ಸ್ವದೇಶಕ್ಕೆ ಮರಳಲು ಪಾಸ್‌ಪೋರ್ಟ್ ಲಭಿಸಿದೆ. ಅವರಿಬ್ಬರು ವೀಸಾ ರದ್ದುಗೊಳ್ಳದೆಯೇ ಜುಲೈ 13ರಂದು ರಾತ್ರಿ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದು, ಮರುದಿನ ಮುಂಜಾನೆ ಮುಂಬೈ ತಲುಪಲಿದ್ದಾರೆ.
ಪೂರ್ವನಿಗದಿಯಂತೆ ಜುಲೈ 13ರಂದು ಮಂಗಳೂರಿನ ನಾಲ್ವರು ಸಹಿತ ಒಟ್ಟು ಒಂಬತ್ತು ಜನರು ಕುವೈತ್‌ನಿಂದ ಪ್ರಯಾಣ ಬೆಳೆಸಬೇಕಿತ್ತು. ವೀಸಾ ರದ್ದುಗೊಳ್ಳುವ ಪ್ರಕ್ರಿಯೆಗೆ ಹಿನ್ನಡೆ ಉಂಟಾದ ಕಾರಣ ಇವರೆಲ್ಲರು ಭಾರತಕ್ಕೆ ಮರಳುವ ಹಾದಿ ಮುಚ್ಚುವ ಪರಿಸ್ಥಿತಿ ಎದುರಾಗಿತ್ತು. ಭಾರತೀಯ ಸಂತ್ರಸ್ತರಿಗೆ ಉದ್ಯೋಗ ನೀಡಿದ್ದ ಅನೆಸ್ಕೋ ಜನರಲ್ ಟ್ರೇಡಿಂಗ್ ಕಂಪನಿಯ ವ್ಯವಹಾರವನ್ನು ಶೋನ್ ನಿರ್ಬಂಧಿಸಿದ ಕಾರಣ ವೀಸಾ ರದ್ದುಗೊಳಿಸುವ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು.

ಜುಲೈ 13ರಂದು ಪ್ರಯಾಣ ಆರಂಭಿಸಬೇಕಿದ್ದ 9 ಮಂದಿಯ ಪೈಕಿ ಅನೆಸ್ಕೋ ಕಂಪನಿಯ ಸಿಬ್ಬಂದಿಯ ಕಣ್ತಪ್ಪಿನಿಂದ ಇಬ್ಬರ ಸಿವಿಲ್ ಐಡಿ ರದ್ದುಗೊಳಿಸುವ ಕೆಲಸ ಬಾಕಿ ಉಳಿದಿತ್ತು. ಸಿವಿಲ್ ಐಡಿ ರದ್ದುಗೊಂಡಿರದ ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್ ಮತ್ತು ಉತ್ತರಪ್ರದೇಶದ ಪಂಕಜ್ ಎಂಬಿಬ್ಬರು ಪೂರ್ವ ನಿಗದಿಯಂತೆ ರಜೆಯಲ್ಲಿ ಹೊರಟವರಂತೆ ಶನಿವಾರದಂದೇ ತಾಯ್ನಡಿಗೆ ಮರಳಲು ಅವಕಾಶ ದೊರೆತಿದೆ. 180 ದಿನದೊಳಗೆ ಇವರು ಕುವೈತ್‌ಗೆ ಮರಳದಿದ್ದರೆ ತನ್ನಿಂತಾನೆ ಇವರ ವೀಸಾ ರದ್ದುಗೊಳ್ಳಲಿದೆ.

ಜುಲೈ 13ಕ್ಕೆ ಕಾಯ್ದಿರಿಸಿದ ವಿಮಾನ ಟಿಕೆಟ್ ರದ್ದುಮಾಡಿದರೆ ಮರಳಿ ಹಣ ಸಿಗುವುದಿಲ್ಲ. ಆದ್ದರಿಂದ ಈ ಮುಂಗಡ ಟಿಕೆಟ್ ಪ್ರಯಾಣದ ದಿನವನ್ನು ಮುಂದಿನ ಗುರುವಾರ ಹಾಗೂ ಶುಕ್ರವಾರಕ್ಕೆ ಮುಂದೂಡಲಾಗಿದೆ. ಒಂದು ವೇಳೆ ಟಿಕೆಟ್ ರದ್ದುಪಡಿಸಬೇಕಾದ ಪ್ರಮೇಯ ಬಂದರೆ, ಅದರ ವೆಚ್ಚವನ್ನು ಕಂಪನಿಯೇ ಭರಿಸಬೇಕು ಎಂದು ರಾಯಭಾರಿ ಕಚೇರಿ ಉದ್ಯೋಗ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಎಚ್ಚರಿಕೆಗೆ ಮಣಿದ ಅನೆಸ್ಕೋ ಕಂಪನಿ
ಅನಿವಾಸಿ ಭಾರತೀಯ ಇಂಜಿನಿಯರ್ ಮೋಹನ್‌ದಾಸ್ ಕಾಮತ್, ಶುಕ್ರವಾರ ಹೊರಡಬೇಕಾಗಿದ್ದ ಇತರರ ಪ್ರಯಾಣದ ಟಿಕೆಟನ್ನು ಮುಂದೂಡಲು ವ್ಯವಸ್ಥೆ ಮಾಡಿದ್ದು, ವ್ಯತ್ಯಾಸ ಮೊತ್ತವನ್ನು ಒಮ್ಮೆಗೆ ಪಾವತಿಸಿದ್ದು, ಅವರು ಪಾವತಿಸಿದ ಮೊತ್ತವನ್ನು ಬಳಿಕ ರಾಯಭಾರಿ ಕಚೇರಿ ನಿರ್ದೇಶನದಂತೆ ಅನೆಸ್ಕೋ ಕಂಪನಿ ಕಾಮತ್ ಅವರಿಗೆ ಮರಳಿಸಿದೆ. ಅನೆಸ್ಕೋ ಕಂಪನಿ ಸಾಮಾನ್ಯ ಕಾರ್ಮಿಕರ ಹೆಸರಿನಲ್ಲಿ ವೀಸಾ ಒದಗಿಸಿ ಭಾರತೀಯ ಕಾರ್ಮಿಕರನ್ನು ಚಾಲಕರನ್ನಾಗಿ ದುಡಿಸಿಕೊಂಡಿತ್ತು. ಇದು ನಿಯಮ ಪ್ರಕಾರ ಅಪರಾಧವಾಗಿದ್ದು, ವ್ಯತ್ಯಾಸ ಮೊತ್ತವನ್ನು ಪಾವತಿಸದಿದ್ದರೆ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ರಾಯಬಾರಿ ಕಚೇರಿ ಅಧಿಕಾರಿಗಳು ನೀಡಿದ ಎಚ್ಚರಿಕೆಗೆ ಅನೆಸ್ಕೋ ಕಂಪನಿ ಮಣಿಯಿತು. ಸಂತ್ರಸ್ತರ ವೀಸಾ ರದ್ದುಗೊಳಿಸುವ ಬದಲು ವೀಸಾ ಜತೆಯಲ್ಲೇ ಅವರನ್ನು ತಾಯ್ನಡಿಗೆ ಕಳುಹಿಸುವಂತೆ ಅನಿವಾಸಿ ಭಾರತೀಯರ ಸಂಘಟನೆ ಹಾಗೂ ರಾಯಭಾರಿ ಕಚೇರಿ ಅಧಿಕಾರಿಗಳ ಸಲಹೆ ಬಗ್ಗೆ ಶೀಘ್ರದಲ್ಲೇ ಉತ್ತರಿಸುವುದಾಗಿ ಕಂಪನಿ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆ.

ಟಿಕೆಟ್, ಪಾಸ್‌ಪೋರ್ಟ್ ಹಸ್ತಾಂತರ
ಸಂತ್ರಸ್ತರ ಪೈಕಿ ಶನಿವಾರ ಭಾರತಕ್ಕೆ ಮರಳಲಿರುವ ಅಭಿಷೇಕ್ ಮಂಜೇಶ್ವರ ಹಾಗೂ ಪಂಕಜ್ ಅವರಿಗೆ ಅನಿವಾಸಿ ಭಾರತೀಯರು ಶುಕ್ರವಾರ ಪ್ರಯಾಣದ ಟಿಕೆಟ್ ಹಾಗೂ ಪಾಸ್‌ಪೋರ್ಟ್ ಹಸ್ತಾಂತರಿಸಿದರು. ಭಾರತೀಯ ಇಂಜಿನಿಯರ್‌ಗಳ ಸಂಘದ ಕುವೈತ್ ಘಟಕದ ಮಾಜಿ ಅಧ್ಯಕ್ಷ ಇಳಂಗೋವನ್, ಸದಸ್ಯ ಮೋಹನ್‌ದಾಸ್ ಕಾಮತ್ ಮಂಜೇಶ್ವರ, ಬಂಟರ ಸಂಘ ಅಧ್ಯಕ್ಷ ಗುರುಪ್ರಸಾದ್ ಹೆಗ್ಡೆ, ಉಪಾಧ್ಯಕ್ಷ ರಕ್ಷಕ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *