ಸ್ವದೇಶಕ್ಕೆ ಮರಳುವ ಆಸೆಯೇ ಬತ್ತಿಹೋಗಿತ್ತು

ಮಂಗಳೂರು: ಕೆಲಸವಿಲ್ಲ.. ವೇತನ ಇಲ್ಲ.. ಮೊದಲು ದೊರೆಯುತ್ತಿದ್ದ ಆಹಾರವೂ ಕ್ರಮೇಣ ನಿಂತು ಹೋಗುವ ಸೂಚನೆ… ಕುವೈತ್‌ನ ಅಪರಿಚಿತ ನಿಯಮಗಳು.. ಕೊಲ್ಲಿ ರಾಷ್ಟ್ರದಲ್ಲಿ ದುಡಿದು ಬದುಕು ಕಟ್ಟಿಕೊಳ್ಳುವ ಆಸೆಯನ್ನು ಪ್ರತಿದಿನ ಕುಗ್ಗಿಸುತ್ತಿತ್ತು. ಸ್ವದೇಶಕ್ಕೆ ಸುರಕ್ಷಿತವಾಗಿ ಮರಳುವ ಆಸೆ ಬತ್ತಿಹೋಗಿತ್ತು…
ಇದು ವಿದೇಶದಲ್ಲಿ ಕೆಲಸ ಒದಗಿಸುವ ಸಂಸ್ಥೆಯೊಂದರ ಜಾಹೀರಾತು ಕಂಡು ಕುವೈತ್‌ಗೆ ತೆರಳಿ ಉದ್ಯೋಗವೂ ಇಲ್ಲದೆ, ವೇತನವೂ ಇಲ್ಲದೆ ನರಕಯಾತನೆ ಅನುಭವಿಸಿ ಸ್ವದೇಶಕ್ಕೆ ಮೊದಲು ಮರಳಿದ ಮಂಗಳೂರಿನ ತಂಡದ ಏಕೈಕ ಸದಸ್ಯ ಅಭಿಷೇಕ್ ಬಡಾಜೆ ಸೋಮವಾರ ತನ್ನ ಕೊಲ್ಲಿ ರಾಷ್ಟ್ರದ ಅನುಭವ ವಿವರಿಸಿದ ಪರಿ.
ಕುವೈತ್‌ನ ಕಂಪನಿಯೊಂದರಲ್ಲಿ ಮೋಟಾರ್ ಸೈಕಲ್‌ನಲ್ಲಿ ಆಹಾರ ಪೂರೈಕೆ ಮಾಡುವ ಉದ್ಯೋಗ ಮಾಡಲು ಜನರು ಬೇಕಾಗಿದ್ದಾರೆ ಎಂದು ಮಾಣಿಕ್ಯ ಸಂಸ್ಥೆಯ ಜಾಹೀರಾತು ಓದಿದೆ. ಜಾಹೀರಾತಿನಲ್ಲಿ ನಮೂದಿಸಿದ ಕಂಪನಿ ಕುವೈತ್‌ನಲ್ಲಿ ಇರುವ ಬಗ್ಗೆ ಮತ್ತು ಅದು ಸರಿಯಾಗಿ ನಡೆಯುತ್ತಿರುವ ಬಗ್ಗೆ ಕುವೈತ್‌ನಲ್ಲೇ ಇರುವ ಗೆಳೆಯರಿಂದ ಖಾತ್ರಿಪಡಿಸಿಕೊಂಡು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದೆ. ಮಂಗಳೂರಿನಿಂದ ಇತರ ಯುವಕರೂ ಜತೆಗಿರುವುದು ಧೈರ್ಯಕೊಟ್ಟಿತು. ದಕ್ಷಿಣ ಕನ್ನಡದ 34 ಸಹಿತ ಒಟ್ಟು 58 ಜನರು ನಮ್ಮ ತಂಡದಲ್ಲಿದ್ದರು. ಮಾಸಿಕ 30 ಸಾವಿರ ರೂ. ವೇತನದ ಭರವಸೆ ಇತ್ತು. ಮಾಣಿಕ್ಯ ಸಂಸ್ಥೆಯವರ ಕೋರಿಕೆಯಂತೆ ಅಲ್ಲಿ- ಇಲ್ಲಿ ಸಾಲ ಎತ್ತಿ 65 ಸಾವಿರ ರೂ. ಪಾವತಿಸಿದೆ. ಕಳೆದ ಜನವರಿ 7ರಂದು ಕುವೈತ್‌ಗೆ ಪಯಣ. ಆದರೆ ಕುವೈತ್ ತಲುಪಿದಾಗ ಕಂಡದ್ದೇ ಬೇರೆ.

ಬದಲಾದ ಕಂಪನಿ
ನಮಗೆ ತೋರಿಸಿದ ಕಂಪನಿ ಬದಲು ಉದ್ಯೋಗಕ್ಕೆ ಇನ್ನೊಂದು ಕಂಪನಿ ತೋರಿಸಲಾಯಿತು. 2-3 ತಿಂಗಳು ಯಾವುದೇ ಕೆಲಸವಿಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ. ನಮ್ಮನ್ನು ಕಳುಹಿಸಿದ ಸಂಸ್ಥೆಯೂ ನಮಗೆ ಉದ್ಯೋಗಕ್ಕೆ ಅವಶ್ಯವಿದ್ದ ಕೆಲವು ದಾಖಲೆಗಳನ್ನು ಕೂಡ ಪೂರೈಸಿರಲಿಲ್ಲ.
ಏಜೆಂಟರನ್ನು ಪದೇಪದೆ ಸಂಪರ್ಕಿಸಿದ ಬಳಿಕ ನಮ್ಮ ಜತೆಗೆ ಬಂದಿದ್ದ ಯುವಕರ ಪೈಕಿ ಎಂಟು ಜನರಿಗೆ ಮಾತ್ರ ಉದ್ಯೋಗ ದೊರೆಯಿತು. ನನಗೆ ಬೈಕ್ ರೈಡರ್ ಕೆಲಸ ಉದ್ಯೋಗ ಒದಗಿಸುವ ಭರವಸೆಯನ್ನು ಮಂಗಳೂರಿನ ಏಜೆಂಟರು ನೀಡಿದ್ದರು. ಆದರೆ ನನಗೆ ತೋರಿಸಿದ ಉದ್ಯೋಗವೇ ಅಲ್ಲಿ ಖಾಲಿ ಇರಲಿಲ್ಲ. ಬದಲಾಗಿ ಮೆಕಾನಿಕಲ್. ಇಲೆಕ್ಟ್ರಿಕಲ್ ಕೆಲಸ ಮಾಡುವಂತೆ ಸೂಚಿಸಲಾಯಿತು. ಆದರೆ ಆ ಉದ್ಯೋಗದ ಕೌಶಲ ನನಗೆ ಇರಲಿಲ್ಲ ಎಂದು ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಅಭಿಷೇಕ್.

ಉದ್ಯೋಗ ಪಡೆಯುವ ಆಸೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ತೊಂದರೆಗೆ ಸಿಲುಕಿದ ಸಂತ್ರಸ್ತರೆಲ್ಲ ಸೇರಿ ವಾಟ್ಸಾಪ್ ಮೂಲಕ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ಗೆ ನಮ್ಮ ಕಷ್ಟ ಹೇಳಿಕೊಂಡೆವು. ನಮ್ಮ ವಾಟ್ಸಾಪ್ ಸಂದೇಶ ಮಂಗಳೂರು ಕರಾವಳಿಯಲ್ಲಿ ವೈರಲ್ ಆಯಿತು. ಕರಾವಳಿ ಮೂಲದ ಜನಪ್ರತಿನಿಧಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಮತ್ತೆ ಸ್ವದೇಶಕ್ಕೆ ಮರಳುವ ಜೀವಂತವಾಯಿತು ಎಂದು ಅಭಿಷೇಕ್ ನೆನಪಿಸಿಕೊಂಡರು.

ಭಾರತೀಯರ ಬೆಂಬಲ
ಕುವೈತ್‌ನ ಭಾರತೀಯ ರಾಯಭಾರಿ ಕಚೇರಿಯ ಸೆಕೆಂಡ್ ಸೆಕ್ರೆಟರಿಸಿಬಿ ಯು.ಎಸ್., ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಅನಿವಾಸಿ ಭಾರತೀಯರಾದ ಮೋಹನ್‌ದಾಸ್ ಕಾಮತ್, ರಾಜ್ ಭಂಡಾರಿ, ಭಾರತೀಯ ಇಂಜಿನಿಯರ್‌ಗಳ ಸಂಘ ಕುವೈತ್ ಘಟಕ, ಕುವೈತ್‌ನ ಕೇರಳ ಮುಸ್ಲಿಂ ಅಸೋಸಿಯೇಶನ್ ವಿವಿಧ ಭಾರತೀಯರು ಹಾಗೂ ಭಾರತೀಯ ಮೂಲದ ಸಂಘಟನೆಗಳು ತೋರಿದ ಪ್ರೀತಿ- ವಿಶ್ವಾಸ ಮರೆಯುವಂತೆಯೇ ಇಲ್ಲ ಎಂದು ನೆನೆಯುತ್ತಾರೆ ಅಭಿಷೇಕ್.

ಮನೆಯಲ್ಲಿ ಹರ್ಷ
ಸುರಕ್ಷಿತವಾಗಿ ಮನೆ ತಲುಪಿದ ಸಂಭ್ರಮ ಮನೆಯಲ್ಲಿದೆ. ನಾಳೆಯಿಂದ ಹೊಸ ಉದ್ಯೋಗ ಹುಡುಕಬೇಕು. ಅಣ್ಣ ಒಂದು ಕಡೆ ಕೆಲಸ ಮಾತನಾಡಿ ಇಟ್ಟಿದ್ದಾನೆ. ಮಂಗಳವಾರ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಸೋಮವಾರ ಸಾಯಂಕಾಲ ದೂರವಾಣಿ ಮೂಲಕ ಅಭಿಷೇಕ್ ‘ವಿಜಯವಾಣಿ’ಗೆ ತಿಳಿಸಿದರು.

15 ಸಂತ್ರಸ್ತರ ಪ್ರಯಾಣ ಮುಂದೂಡಿಕೆ
ಕುವೈತ್‌ನಿಂದ ಸೋಮವಾರ ರಾತ್ರಿ ಭಾರತಕ್ಕೆ ಪ್ರಯಾಣಿಸಬೇಕಾಗಿದ್ದ 15 ಮಂದಿ ಸಂತ್ರಸ್ತರು ಕೂಡ ನಿಗದಿತ ದಿನದ ಪ್ರಯಾಣ ರದ್ದುಗೊಳಿಸುವ ಅನಿವಾರ‌್ಯತೆಗೆ ಸಿಲುಕಿದ್ದಾರೆ.
ಪೂರ್ವ ನಿಗದಿಯಂತೆ ಇವರೆಲ್ಲರ ವೀಸಾ ರದ್ದುಗೊಂಡಿದ್ದು, ಪ್ರಯಾಣ ಆರಂಭಿಸುವ ತನಕ ಇರಲು ಅಗತ್ಯವಿರುವ ತಾತ್ಕಾಲಿಕ ವೀಸಾ ಪಡೆದುಕೊಳ್ಳಲು ಸಂತ್ರಸ್ತರಿಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಆಂಧ್ರಪ್ರದೇಶಕ್ಕೆ ತೆರಳಬೇಕಾಗಿದ್ದ 15 ಸಂತ್ರಸ್ತರ ಪ್ರಯಾಣವನ್ನು ಸುಕ್ರವಾರಕ್ಕೆ ಮುಂದೂಡಲಾಗಿದೆ. ಜು.15 ಕ್ಕೆ ನಿಗದಿಯಾಗಿದ್ದ ಟಿಕೆಟ್ ರದ್ದುಗೊಂಡಿರುವ ಕಾರಣ ಅವರು ಮುಂದಿನ ಪ್ರಯಾಣದ ಟಿಕೆಟ್ ವ್ಯವಸ್ಥೆಯನ್ನು ಅವರಿಗೆ ಉದ್ಯೋಗ ನೀಡಿದ ಕಂಪನಿಯೇ ಒದಗಿಸುವ ಭರವಸೆ ನೀಡಿದೆ.

Leave a Reply

Your email address will not be published. Required fields are marked *