ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ ಜ.22ರಂದು 10.30ಕ್ಕೆ ಜ್ಞಾನ ಸಹ್ಯಾದ್ರಿಯ ಬಸವ ಸಭಾಭವನದಲ್ಲಿ ನಡೆಯಲಿದೆ. ರಾಜ್ಯಪಾಲ, ವಿವಿ ಕುಲಾಧಿಪತಿ ಥಾವರಚಂದ್ ಗೆಹಲೋತ್ ಪದವಿ ಪ್ರದಾನ ಮಾಡುವರು.
ವಿವಿ ಸಹ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಹೈದರಾಬಾದ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಘಟಿಕೋತ್ಸವ ಭಾಷಣ ಮಾಡುವರು. ಈ ಬಾರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಘಟಿಕೋತ್ಸವದಲ್ಲಿ 18,885 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. 146 ಸ್ವರ್ಣ ಪದಕಗಳನ್ನು 84 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. 17 ನಗದು ಬಹುಮಾನಕ್ಕೆ 14 ವಿದ್ಯಾರ್ಥಿಗಳು ಭಾಜನರಾಗಿದ್ದಾರೆ. ಎಂಎ ಕನ್ನಡ ಭಾರತಿ ವಿಭಾಗದ ವಿದ್ಯಾರ್ಥಿ ಬಿ.ಜೆ.ವಸಂತಕುಮಾರ್ 10 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನಕ್ಕೆ ಪಾತ್ರರಾಗಿದ್ದಾರೆ ಎಂದರು.
ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಎಂ.ಎಸ್ಸಿ ವಿದ್ಯಾರ್ಥಿನಿ ಸಾನಿಯಾ ಫಿರ್ದೋಸ್ 6 ಸ್ವರ್ಣ ಪದಕ, ನಾಲ್ವರು ವಿದ್ಯಾರ್ಥಿಗಳು ತಲಾ 5 ಸ್ವರ್ಣ, ನಾಲ್ವರು ತಲಾ 4 ಸ್ವರ್ಣ ಪದಕ ಹಾಗೂ ಈ ಪೈಕಿ ಒಬ್ಬರು ಮಾತ್ರ 2 ನಗದು ಬಹುಮಾನ ಪಡೆದಿದ್ದಾರೆ. ಎಂಟು ಮಂದಿ ತಲಾ 3 ಸ್ವರ್ಣ ಪದಕ ಪಡೆದಿದ್ದು, ಇದರಲ್ಲಿ ಒಬ್ಬರು 1 ನಗದು ಬಹುಮಾನ ಪಡೆದಿದ್ದಾರೆ ಎಂದು ತಿಳಿಸಿದರು.
ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್ ಮಾತನಾಡಿ, ಕಲಾನಿಕಾಯದಲ್ಲಿ 64, ವಾಣಿಜ್ಯ ವಿಭಾಗದಲ್ಲಿ 18, ಶಿಕ್ಷಣ ನಿಕಾಯದಲ್ಲಿ 18 ಹಾಗೂ ವಿಜ್ಞಾನ ನಿಕಾಯದಲ್ಲಿ 104 ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪಿಎಚ್.ಡಿ ಪಡೆಯಲು ಅರ್ಹರಾಗಿದ್ದಾರೆ ಎಂದರು. ಕುವೆಂಪು ವಿವಿ ಹಣಕಾಸು ವಿಭಾಗದ ಕುಲಸಚಿವ ಎ.ಎಲ್.ಮಂಜುನಾಥ್, ವಿವಿ ಪಿಆರ್‌ಒ ಡಾ. ಎಂ.ಆರ್.ಸತ್ಯಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.
ಕಾಗೋಡು ಸೇರಿ ಮೂವರಿಗೆ ಡಾಕ್ಟರೇಟ್
ಕುವೆಂಪು ವಿಶ್ವವಿದ್ಯಾಲಯದಿಂದ ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಲಾಗಿದೆ. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಮುಂಬೈನ ವಿಜ್ಞಾನಿ ಸಿ.ಎಸ್.ಉನ್ನಿಕೃಷ್ಣನ್ ಮತ್ತು ಭದ್ರಾವತಿಯ ಯೋಗಗುರು ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ಒಲಿದಿದೆ ಎಂದು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.