ನಿರಶನ ಹಿಂಪಡೆದ ರೈತರು, ಬೆಂಬಲ ಬೆಲೆ ಯೋಜನೆಯನ್ವಯ ತೊಗರಿ ಖರೀದಿಸುವ ಒತ್ತಡಕ್ಕೆ ಮಣಿದ ಅಧಿಕಾರಿಗಳು

ಕುಷ್ಟಗಿ: ಬೆಂಬಲ ಬೆಲೆ ಯೋಜನೆಯನ್ವಯ ತೊಗರಿ ಖರೀದಿಸುವಂತೆ ಆಗ್ರಹಿಸಿ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಶಾಸಕರ ಕಚೇರಿ ಮುಂಭಾಗ ತಾಲೂಕಿನ ವಿವಿಧ ಗ್ರಾಮಗಳ ರೈತರು ಹಮ್ಮಿಕೊಂಡಿದ್ದ ನಿರಶನ ಶುಕ್ರವಾರ ಸಂಜೆ ಅಂತ್ಯಗೊಂಡಿತು.
ಎರಡನೇ ದಿನಕ್ಕೆ ಕಾಲಿಟ್ಟ ನಿರಶನ ಸ್ಥಳಕ್ಕೆ ಮಧ್ಯಾಹ್ನದ ವರೆಗೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿರಲಿಲ್ಲ. ಉಪವಾಸದಿಂದ ಕೆಲ ರೈತರ ಆರೋಗ್ಯದಲ್ಲಿ ಏರುಪೇರಾಗಿ ತಾಲೂಕು ಆಸ್ಪತ್ರೆಯ ಡಾ.ಕಾಪ್ಸೆ ಚಿಕಿತ್ಸೆ ನೀಡಿದರು. ಸಂಜೆ ಹೊತ್ತಿಗೆ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತೆ ಸಿ.ಡಿ ಗೀತಾ ಹಾಗೂ ಸ್ಥಳೀಯ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದಾಗ ನಿರಶನ ಹಿಂಪಡೆದರು.
ತಹಸೀಲ್ದಾರ್ ಕೆ.ಎಂ.ಗುರುಬಸವರಾಜ, ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಭಾಕರ ಅಂಗಡಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ, ಸಿಪಿಐ ಸುರೇಶ ತಳವಾರ, ಪಿಎಸ್‌ಐ ವಿಶ್ವನಾಥ ಹಿರೇಗೌಡರ್, ರೈತರಾದ ಅಂದಾನಗೌಡ ಪಾಟೀಲ್, ಮಹಾಂತಗೌಡ ಪಾಟೀಲ್, ಶರಣಪ್ಪ ನಾಲತ್ವಾಡ, ದೊಡ್ಡನಗೌಡ ಸರನಾಡಗೌಡರ್, ಸಂಗಪ್ಪ ಎಲಿಗಾರ ಮತ್ತಿತರರಿದ್ದರು.