ಕುಷ್ಟಗಿ: ತೋಟದ ಮನೆಗಳಿಗೆ ವಿದ್ಯುತ ಸಂಪರ್ಕ ಒದಗಿಸುವಂತೆ ಒತ್ತಾಯಿಸಿ ರೈತ ಸಂಘ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ತಹಸೀಲ್ದಾರ್ ಎಂ.ಸಿದ್ದೇಶಗೆ ಸೋಮವಾರ ಸಲ್ಲಿಸಿದರು.
ನೀರಾವರಿ ಸೌಕರ್ಯ ಇಲ್ಲದ ರೈತರು ಬೋರ್‌ವೆಲ್ ಪಂಪ್‌ಸೆಟ್ ಮುಖಾಂತರ ಜಮೀನುಗಳಿಗೆ ನೀರು ಹಾಯಿಸಿ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಇಂತಹ ರೈತರು ಬಹುತೇಕ ತೋಟದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ತೋಟದ ಮನೆಗಳಿಗೆ ನೀಡಲಾಗಿದ್ದ ಸಿಂಗಲ್ ಫೇಸ್ ವಿದ್ಯುತ್ ಅನ್ನು ಇತ್ತೀಚಿಗೆ ಕಡಿತಗೊಳಿಸಲಾಗಿದೆ. ಇದರಿಂದ ರೈತರು ವಿಷಜಂತುಗಳ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ತೋಟದ ಮನೆಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಇಲ್ಲದಿದ್ದಲ್ಲಿ ಸೆ.13ರಿಂದ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ರೈತ ಸಂಘದ ಜಿಲ್ಲಾ ಅಧ್ಯಕ್ಷ ನಜೀರಸಾಬ್ ಮೂಲಿಮನಿ, ತಾಲೂಕು ಅಧ್ಯಕ್ಷ ಮಹಾಂತೇಶ ಬಳಿಗಾರ, ಗೌರವ ಅಧ್ಯಕ್ಷ ಶಂಕರಗೌಡ ಬೀಳಗಿ, ಪ್ರಧಾನ ಕಾರ್ಯದರ್ಶಿ ಬಸಪ್ಪ ಅಮ್ಮಣ್ಣವರ್, ಕಾರ್ಯಾಧ್ಯಕ್ಷ ಶರಣಪ್ಪ ಕಮತರ ಇತರರು ಇದ್ದರು.