ತರಬೇತಿ ಹಂತದಲ್ಲಿಯೇ ಸಮಸ್ಯೆ ಪರಿಹರಿಸಿಕೊಳ್ಳಲು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಸಲಹೆ

ವಿವಿಧ ಗ್ರಾಮಗಳ ಬಿಎಲ್‌ಒಗಳಿಗೆ ತರಬೇತಿ ಕಾರ್ಯಕ್ರಮ

ಕುಷ್ಟಗಿ: ಚುನಾವಣೆಗಳು ಸುಗಮವಾಗಿ ನಡೆಯಲು ಮತದಾರರ ಪಟ್ಟಿ ಸರಿ ಇರಬೇಕು. ಈ ಕಾರಣಕ್ಕಾಗಿಯೇ ತಂತ್ರಜ್ಞಾನ(ಆ್ಯಪ್) ಮೂಲಕ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ತಿಳಿಸಿದರು.

ತಂತ್ರಜ್ಞಾನದ ಮೂಲಕ ಮತದಾರರ ಪಟ್ಟಿ ಪರಿಷ್ಕರಿಸಲು ತಾಲೂಕಿನ ವಿವಿಧ ಗ್ರಾಮಗಳ ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳಿಗೆ ಪಟ್ಟಣದ ರೇಣುಕಾಚಾರ್ಯ ಮಂಗಲಭವನದಲ್ಲಿ ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ಚುನಾವಣೆ ಸಂದರ್ಭದಲ್ಲಿ ಪಟ್ಟಿ ಪರಿಷ್ಕರಿಸುತ್ತ ಬರಲಾಗಿದೆ. ಆದಾಗ್ಯೂ ಪಟ್ಟಿಯಲ್ಲಿನ ಗೊಂದಲಗಳು ನಿವಾರಣೆಯಾಗಿಲ್ಲ. ಈ ಬಾರಿ ಮೊಬೈಲ್ ಆ್ಯಪ್ ಮುಖಾಂತರ ಪಟ್ಟಿ ಪರಿಷ್ಕರಿಸಲಾಗುತ್ತಿದೆ. ಇದರಿಂದ ಗೊಂದಲಗಳೆಲ್ಲವೂ ನಿವಾರಣೆಗೊಳ್ಳಲಿವೆ. ಆ್ಯಪ್ ಬಳಕೆಗೆ ಸಂಬಂಧಿಸಿದ ಯಾವುದೇ ಸಂದೇಹ, ಗೊಂದಲಗಳಿದ್ದಲ್ಲಿ ತರಬೇತಿ ಹಂತದಲ್ಲಿಯೇ ಪರಿಹರಿಸಿಕೊಳ್ಳಿ ಎಂದು ಹೇಳಿದರು.

ಆ್ಯಪ್ ಬಳಕೆ ಕುರಿತು ತರಬೇತಿ ನೀಡಿದ ಪಟ್ಟಣದ ಪಾಲಿಟೆಕ್ನಿಕ್ ಉಪನ್ಯಾಸಕ ಶಂಕ್ರಪ್ಪ ಚಾಮಲಾಪುರ, ತಂತ್ರಜ್ಞಾನ ಮೂಲಕ ತಪ್ಪಿಲ್ಲದ ಮತದಾರರ ಪಟ್ಟಿ ತಯಾರಿಸುವ ಗುರಿ ಹೊಂದಲಾಗಿದೆ. ಗುರಿ ಸಾಧನೆಗೆ ಬಿಎಲ್‌ಒಗಳ ಸಹಕಾರ ಅತ್ಯಗತ್ಯ. ಆ್ಯಪ್ ಬಳಕೆ ಮಾಡುವ ಆರಂಭದಲ್ಲಿ ಗೊಂದಲ, ಆತಂಕಗಳು ಎದುರಾಗುವುದು ಸಹಜ. ಕಾಲಕ್ರಮೇಣ ಸರಳಗೊಳ್ಳಲಿದೆ ಎಂದರು. ತರಬೇತಿದಾರ ಶರಣಪ್ಪ, ಶಿರಸ್ತೇದಾರರಾದ ರಜನಿಕಾಂತ, ಶರಣಯ್ಯ ನಿಡಗುಂದಿಮಠ, ಚುನಾವಣಾ ಸಿಬ್ಬಂದಿ ಅಜಿತ್ ಇತರರು ಇದ್ದರು. ತಾಲೂಕಿನ ವಿವಿಧ ಗ್ರಾಮಗಳ ಬಿಎಲ್‌ಒಗಳು ಪಾಲ್ಗೊಂಡಿದ್ದರು.

ಮೊಬೈಲ್ ಇಲ್ಲದೆ ತರಬೇತಿ!
ಆ್ಯಪ್ ಬಳಕೆಗೆ ಮೊಬೈಲ್‌ಗಳೇ ಇಲ್ಲ. ಮೊಬೈಲ್ ವಿತರಿಸದೆ ತರಬೇತಿ ನೀಡಿದರೆ ಅರ್ಥ ಆಗುವುದಿಲ್ಲ. ಮೊಬೈಲ್ ವಿತರಿಸದ ಹೊರತು ಪರಿಷ್ಕರಣೆ ನಡೆಸಲು ಕಷ್ಟಸಾಧ್ಯವಾಗುತ್ತದೆ ಎಂದು ಬಿಎಲ್‌ಒಗಳು ಅಲವತ್ತುಕೊಂಡರು. ಮೊಬೈಲ್ ವಿತರಣೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಗಳೂ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ. ಮೊಬೈಲ್ ವಿತರಣೆಗೂ ಮುನ್ನ ತರಬೇತಿ ನೀಡುವಂತೆ ನಿರ್ದೇಶನವಿದೆ ಎಂದು ತಹಸೀಲ್ದಾರ್ ಗುರುಬಸವರಾಜ ಪ್ರತಿಕ್ರಿಯಿಸಿದರು.

ಸ್ಥಳ ಬದಲಾವಣೆ ಗೊಂದಲ
ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಭವನದಲ್ಲಿ ಕಾರ್ಯಕ್ರಮ ಇರುವುದಾಗಿ ತಿಳಿಸಿದ್ದ ಅಧಿಕಾರಿಗಳು ಕೊನೇ ಹಂತದಲ್ಲಿ ಸ್ಥಳ ಬದಲಾವಣೆ ಮಾಡಿ ರೇಣುಕಾಚಾರ್ಯ ಮಂಗಲಭವನದಲ್ಲಿ ನಡೆಸಿದರು. ಈ ಕುರಿತು ಮಾಹಿತಿ ಇರದ ಬಿಎಲ್‌ಒಗಳು ಮಲ್ಲಿಕಾರ್ಜುನ ಭವನಕ್ಕೆ ತೆರಳಿ ನಂತರ ರೇಣುಕಾಚಾರ್ಯ ಮಂಗಲಭವನಕ್ಕೆ ಬರುವಂತಾಯಿತು. ಹೀಗಾಗಿ ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾಯಿತು.

Leave a Reply

Your email address will not be published. Required fields are marked *