ಟೆಂಗುಂಟಿ-ಎಂ.ಗುಡದೂರು ರಸ್ತೆಯಲ್ಲಿ ಸಂಚಾರ ದುಸ್ತರ ಣ ನಿರ್ಮಾಣಗೊಂಡು ಮೂರೇ ವರ್ಷಕ್ಕೆ ಹಾಳಾದ ಮಾರ್ಗ
ವಿಶ್ವನಾಥ ಸೊಪ್ಪಿಮಠ
ಕುಷ್ಟಗಿ: ತಾಲೂಕಿನ ಟೆಂಗುಂಟಿ ಗ್ರಾಮದಿಂದ ಎಂ.ಗುಡದೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಭಾಗಶಃ ಹಾಳಾಗಿದೆ. ಮೂರು ಕಿಲೋ ಮೀಟರ್ ಅಂತರದ ರಸ್ತೆಯಲ್ಲಿ ನೂರು ಅಡ್ಡಿಗಳನ್ನು ದಾಟಿ ತೆರಳುವ ಪರಿಸ್ಥಿತಿ ಇದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಸ್ತೆ ಉದ್ದಕ್ಕೂ ನಿರ್ಮಾಣಗೊಂಡಿರುವ ಗುಂಡಿಗಳು, ಅಲ್ಲಲ್ಲಿ ಬಿದ್ದಿರುವ ಕೊರಕಲು, ಬಿರುಕು ಕಾಣಿಸಿಕೊಂಡು ಕುಸಿಯುವ ಹಂತದಲ್ಲಿರುವ ಸೇತುವೆ ಅಪಾಯದ ಮುನ್ಸೂಚಕವಾಗಿವೆ. ಹಗಲು ಹೊತ್ತು ಆತಂಕದಲ್ಲಿ ಓಡಾಡುವ ವಾಹನ ಸವಾರರು, ಕತ್ತಲಾಗುವ ಮುನ್ನವೇ ಊರು ಸೇರುತ್ತಿದ್ದಾರೆ. ರಸ್ತೆ ಹಾಳಾಗಿದ್ದರೂ ಗುಂಡಿ ಮುಚ್ಚಿಸುವ ಕಾರ್ಯ ನಡೆಯದಿರುವುದು ಅಚ್ಚರಿ ಮೂಡಿಸಿದೆ.
ದೊಡ್ಡಬಸವಾರ್ಯರ ಮಠ ಇರುವ ಸುಕ್ಷೇತ್ರ ಎಂ.ಗುಡದೂರು ಗ್ರಾಮಕ್ಕೆ ಪ್ರತಿ ಅಮಾವಾಸ್ಯೆ ಹಾಗೂ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ನೂರಾರು ಭಕ್ತರು ಬಂದು ಹೋಗುತ್ತಿದ್ದಾರೆ. ಸಿಂಧನೂರು, ಲಿಂಗಸುಗೂರು, ಗಂಗಾವತಿ ಕಡೆಯಿಂದ ಬರುವ ಭಕ್ತರು ಹಿರೇಮನ್ನಾಪುರ ಮಾರ್ಗವಾಗಿ ಬಂದರೆ, ಕುಷ್ಟಗಿ ಮಾರ್ಗವಾಗಿ ಬರುವ ಭಕ್ತರು ಇದೇ ರಸ್ತೆ ಅವಲಂಬಿಸಬೇಕಿದೆ. ಟೆಂಗುಂಟಿ ಹಾಗೂ ಎಂ.ಗುಡದೂರಿನ ಬಹುತೇಕ ರೈತರ ಜಮೀನುಗಳು ರಸ್ತೆ ಅಕ್ಕ ಪಕ್ಕ ಇರುವುದರಿಂದ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಕೃಷಿ ಉತ್ಪನ್ನ ಕೊಂಡೊಯ್ಯಲು ಹರಸಾಹಸ ಪಡಬೇಕಿದೆ.
2017-18ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 50ಲಕ್ಷ ರೂ. ಖರ್ಚು ಮಾಡಿ ಯೋಜನಾ ವಿಭಾಗದಿಂದ 2019ರ ಅ. ತಿಂಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡು ಮೂರು ವರ್ಷವೂ ಗತಿಸಿಲ್ಲ. ಆಗಲೇ ಹಾಳಾಗಿದೆ. ಕಾಮಗಾರಿ ಮುಕ್ತಾಯಗೊಂಡ ನಂತರ 5ವರ್ಷ ನಿರ್ವಹಣೆ ಮಾಡಬೇಕು. 6ನೇ ವರ್ಷ ಮರು ಡಾಂಬರೀಕರಣ ಮಾಡಬೇಕೆಂಬ ನಿಯಮ ಇದ್ದರೂ ಗುತ್ತಿಗೆದಾರರಾಗಲಿ ಅನುಷ್ಠಾನ ಇಲಾಖೆ ಅಧಿಕಾರಿಗಳಾಗಲಿ ರಸ್ತೆ ಕಡೆ ಮುಖ ಮಾಡಿಲ್ಲ ಎಂದು ಅವಳಿ ಗ್ರಾಮಸ್ಥರು ದೂರುತ್ತಿದ್ದಾರೆ.
ಟೆಂಗುಂಟಿಯಿಂದ ಎಂ.ಗುಡದೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಳಾಗಿದೆ. ಡಾಂಬರೀಕರಣ ಕಾಮಗಾರಿ ಮುಗಿದು ಮೂರು ವರ್ಷವೂ ಗತಿಸಿಲ್ಲ. ಆಗಲೇ ಹದಗೆಟ್ಟಿದೆ. ನಿರ್ವಹಣೆ ಮಾಡಬೇಕಿರುವ ಗುತ್ತಿಗೆದಾರರು ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಸಂಚಾರ ದುಸ್ತರವಾಗಿದೆ.
|ಕನಕಪ್ಪ ಆರ್.ತಳವಾರ ಟೆಂಗುಂಟಿ ಗ್ರಾಮದ ಯುವಕಟೆಂಗುಂಟಿ-ಎಂ.ಗುಡದೂರು ರಸ್ತೆ ಕಾಮಗಾರಿ ನಿರ್ವಹಿಸಿದ ಇಲಾಖೆಗೆ ಪತ್ರ ಬರೆದು ನಿಯಮಾನು ಸಾರ ನಿರ್ವಹಣೆ ಮಾಡುವಂತೆ ಸೂಚಿಸ ಲಾಗುವುದು. ಕಳಪೆ ಕಾಮಗಾರಿ ನಡೆದಿದ್ದರೆ ಮೇಲಧಿಕಾರಿಗಳಿಗೆ ವರದಿ ಮಾಡಲಾಗುವುದು.
| ನಿಂಗಪ್ಪ ಮಸಳಿ ತಾಪಂ ಇಒ ಕುಷ್ಟಗಿ