ಜನ ಧರ್ಮಿಷ್ಠರಾಗಲಿ, ಜನಾರ್ದನ ಮಳೆ ತರಲಿ – ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರ ಹಾರೈಕೆ

ಕುಷ್ಟಗಿ: ಜನ ಧರ್ಮಿಷ್ಠರೂ, ಆರೋಗ್ಯವಂತರೂ ಆಗಬೇಕು. ಜನಾರ್ದನ ಮಳೆ ತಂದು ಬರಗಾಲದಿಂದ ಬಳಲುತ್ತಿರುವ ಈ ಭಾಗಕ್ಕೆ ಕರುಣೆ ತೋರಬೇಕು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹಾರೈಸಿದರು.

ಪಟ್ಟಣದ ಅಡವಿರಾಯ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನಕ್ಕೆ ಆಗಮಿಸಿ, ಶುಕ್ರವಾರ ಅನುಗ್ರಹ ಸಂದೇಶ ನೀಡಿದರು. ಭಗವಂತನ ಸಾಕ್ಷಾತ್ಕಾರಕ್ಕೆ ವಾಯುದೇವರೇ ಪರಿಶುದ್ಧ ಮಾಧ್ಯಮ. ಅವರ ಸನ್ನಿಧಾನ ಉಪಾಸನೆಗೆ ಯೋಗ್ಯ. ಅಂಧಃಕಾರ ಹೊಡೆದೋಡಿಸುವ ಶಕ್ತಿ ವಾಯುದೇವರಿಗಿದ್ದು, ಅಂಥ ವಾಯುದೇವರ ದಿವ್ಯ ಸನ್ನಿಧಾನ ಈ ಅಡವಿರಾಯ ದೇವಸ್ಥಾನದಲ್ಲಿದೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ಮಧ್ವಾಚಾರ್ ಪೂಜಾರ್, ವಾದಿರಾಜ ಆಚಾರ್, ಸತ್ಯನಾರಾಯಣಾಚಾರ್ ಬಳ್ಳಾರಿ, ಸತ್ಯನಾರಾಯಣಾಚಾರ್ ನಾಗರಹಳ್ಳಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ, ಪ್ರಮುಖರಾದ ಶ್ರೀನಿವಾಸಾಚಾರ್ ಮುಂಗಲಿ, ಹನುಮೇಶಾಚಾರ್ ಡಬೇರ್, ಹನುಮೇಶ ವಜ್ರಬಂಡಿ, ಅರವಿಂದ ದೇಸಾಯಿ, ಜಯತೀರ್ಥ ಸೌದಿ, ಅಡವಿ ಆಚಾರ್ ಚಳಗೇರಿ, ಶ್ರೀನಿವಾಸ ಬಿಜಕಲ್, ತಮ್ಮಣ್ಣಾಚಾರ್ ದಿಗ್ಗಾವಿ, ಬಾಬು ಪುರೋಹಿತ್, ರವಿ ಆಚಾರ್, ಶ್ರೀನಿವಾಸ ಹಳ್ಳೂರು, ರಾಘವೇಂದ್ರ ದಿಗ್ಗಾವಿ ಇತರರು ಇದ್ದರು.

ಮಂತ್ರಾಲಯ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ
ಕುಷ್ಟಗಿಯ ಅಡವಿರಾಯ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಆಗಮಿಸಿದ್ಧ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಪೂರ್ಣ ಕುಂಭಗಳೊಂದಿಗೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳ ಪಾದಪೂಜೆಯನ್ನು ಭಕ್ತರು ನೆರವೇರಿಸಿದರು. ಭಕ್ತರಿಗೆ ತಪ್ತ ಮುದ್ರಾಧಾರಣೆ, ಪಂಡಿತರಿಂದ ಉಪನ್ಯಾಸ ನಡೆದವು. ಅಡವಿ ಮುಖ್ಯ ಪ್ರಾಣೇಶಾಷ್ಟಕ ಮಾಲಿಕೆಯನ್ನು ಶ್ರೀಗಳು ಬಿಡುಗಡೆ ಮಾಡಿದರು. ಭಕ್ತರು ಶ್ರೀಗಳ ಮೇಲೆ ಪುಷ್ಪವೃಷ್ಟಿಗರೆದ ನಂತರ, ದೇವಸ್ಥಾನ ಟ್ರಸ್ಟ್ ಫಲಪುಷ್ಪ ಸಮರ್ಪಿಸಿತು. ಸಂಸ್ಥಾನ ಪೂಜೆ, ಅನ್ನ ಸಮತರ್ಪಣೆ, ಫಲಮಂತ್ರಾಕ್ಷತೆ ಅನುಗ್ರಹಿಸಿದ ನಂತರ ಶ್ರೀಗಳನ್ನು ಆದರ ಪೂರ್ವಕವಾಗಿ ಬೀಳ್ಕೊಡಲಾಯಿತು.

ಶಿಷ್ಯನಲ್ಲಿರುವ ಕೆಟ್ಟ ಸ್ವಾಬಾವ ಬದಲಿಸಿ, ಆತನನ್ನು ಸನ್ಮಾರ್ಗಕ್ಕೆ ಕರೆದೊಯ್ಯುವ ಜವಾಬ್ದಾರಿ ಗುರುವಿನದು. ಶ್ರೀ ರಾಘವೇಂದ್ರ ಸ್ವಾಮಿಗಳು ಅಂಥ ಗುರುಗಳು. ವಾಯುದೇವರ ಪ್ರತಿಬಿಂಬದಂತಿರುವ ರಾಯರ ಬಿಂಬೋಪಾಸನೆ ಮಾಡಬೇಕು.
| ಶ್ರೀ ಸುಬುಧೇಂದ್ರ ತೀರ್ಥರು ಮಂತ್ರಾಲಯ ಮಠದ ಪೀಠಾಧಿಪತಿ

Leave a Reply

Your email address will not be published. Required fields are marked *