More

    ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣತೊಟ್ಟ ಗ್ರಾಮಸ್ಥರು: ಕುಷ್ಟಗಿ ಗಡಿಯ ಮದ್ನಾಳ ಜನರಿಂದ ದೇಣಿಗೆ; ಕೊಠಡಿ-ಮೈದಾನಕ್ಕೆ ಜಾಗ ಖರೀದಿಸಲು ಯತ್ನ

    ಕುಷ್ಟಗಿ: ತಾಲೂಕಿನ ಗಡಿಯಲ್ಲಿರುವ ಮದ್ನಾಳ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರು ಪಣತೊಟ್ಟಿದ್ದಾರೆ. ಸ್ಮಾರ್ಟ್‌ಕ್ಲಾಸ್ ಸೇರಿದಂತೆ ಅಭಿವೃದ್ಧಿಗಾಗಿ ಈಗಾಗಲೇ 1.50 ಲಕ್ಷ ರೂ. ದೇಣಿಗೆ ನೀಡಿದ್ದು, ಕೊಡುಗೈ ದಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

    ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಸಂಬಂಧ ಜಮೀನು ಮಾರಾಟ ಮಾಡಿ ಖರ್ಚು ನಿಭಾಯಿಸಿದ ರೈತ ದ್ಯಾಮಣ್ಣ ಕಾರಿ ಮಾದರಿಯಾಗಿದ್ದು, ಅವರ ಮಗಳು ಶರಣಮ್ಮ ಹೂವಿನಹಡಗಲಿಯಲ್ಲಿ ತಹಸೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಪಿಎಸ್‌ಐ ಹಾಗೂ ಇತರ ಹುದ್ದೆಗಳನ್ನು ಅಲಂಕರಿಸಿರುವವರು ಇದ್ದಾರೆ. ಶಿಕ್ಷಣದ ಮಹತ್ವ ಅರಿತಿರುವ ಕಾರಣಕ್ಕೆ ಗ್ರಾಮದಲ್ಲಿ ಸರ್ಕಾರಿ ನೌಕರರ ಸಂಖ್ಯೆ ಹೆಚ್ಚುತ್ತಿದೆ.

    ಕೇವಲ 250 ಮನೆಗಳು ಹಾಗೂ ಒಂದು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸರ್ಕಾರಿ ಹಿಪ್ರಾ ಶಾಲೆಯ 1-7ನೇ ತರಗತಿ ವರೆಗೆ 187 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ 4 ಕೊಠಡಿಗಳಿದ್ದು, ಆ ಪೈಕಿ ಎರಡು ಶಿಥಿಲಗೊಂಡಿವೆ. ಕೊಠಡಿ ನಿರ್ಮಾಣಕ್ಕೆ ಹಾಗೂ ಆಟದ ಮೈದಾನಕ್ಕೆ ಸ್ಥಳಾವಕಾಶದ ಕೊರತೆ ಇರುವ ಕಾರಣ ಶಾಲೆಗೆ ಹೊಂದಿಕೊಂಡಿರುವ 4 ಗುಂಟೆ ಜಮೀನು ಖರೀದಿಸಿ ನೀಡಲು ಗ್ರಾಮಸ್ಥರು ಪ್ರಯತ್ನ ನಡೆಸಿದ್ದಾರೆ. ಪ್ರಾಥಮಿಕ ಶಿಕ್ಷಣ ನಂತರ ಮೂರು ಕಿಮೀ ಅಂತರದಲ್ಲಿರುವ ಯರಗೇರಾ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿಯೇ ತೆರಳಿ ಪ್ರೌಢಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕುಷ್ಟಗಿ, ಗದಗ ಜಿಲ್ಲೆಯ ಗಜೇಂದ್ರಗಡ, ಬಾಗಲಕೋಟೆ ಜಿಲ್ಲೆಯ ಇಳಕಲ್‌ಗೆ ತೆರಳಿ ಕಾಲೇಜು ಶಿಕ್ಷಣ ಪಡೆಯುವ ಮೂಲಕ ಶೈಕ್ಷಣಿಕ ಪ್ರಗತಿ ಹೊಂದುತ್ತಿದ್ದಾರೆ.

    ಹರಿದು ಬಂದ ದೇಣಿಗೆ: ಶಾಲೆಯ ಅಭಿವೃದ್ಧಿಗಾಗಿ ಮುಖ್ಯಶಿಕ್ಷಕ ಶರಣಪ್ಪ ತುಮರಿಕೊಪ್ಪ ಒಂದು ದಿನದ ವೇತನ ನೀಡಿದ್ದಾರೆ. ಗ್ರಾಮದ ನಿವಾಸಿ, ಹೂವಿನಹಡಗಲಿ ತಹಸೀಲ್ದಾರ್ ಶರಣಮ್ಮ ಕಾರಿ ಹಾಗೂ ಗ್ರಾಮದ ವಾಟರ್‌ಮನ್, ಬಿಲ್ ಕಲೆಕ್ಟರ್, ಗ್ರಾಪಂ-ಎಸ್ಡಿಎಂಸಿ ಸದಸ್ಯರು, ವಿವಿಧ ನೌಕರಿಯಲ್ಲಿರುವವರು, ಅಷ್ಟೇ ಅಲ್ಲದೆ ರೈತರೂ ಒಂದು ಸಾವಿರದಿಂದ 20 ಸಾವಿರ ರೂ.ವರೆಗೆ ದೇಣಿಗೆ ನೀಡಿದ್ದು ವಿಶೇಷ. ಗ್ರಾಮಸ್ಥರ ಜತೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಸಹ ಕೈಜೋಡಿಸಿದ್ದಾರೆ. ಶಾಲೆಯ ಗೋಡೆಗಳ ಮೇಲೆ ಪರಿಸರ, ನೀರಿನ ಮಹತ್ವ, ಸ್ತಬ್ದಚಿತ್ರ, ಅಧ್ಯಾತ್ಮ ಇನ್ನಿತರ ಮಾಹಿತಿ ಇರುವ ಚಿತ್ರ-ಬರಹಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಸದ್ಯ ಸ್ಮಾರ್ಟ್‌ಕ್ಲಾಸ್ ಆರಂಭಿಸಲು ಸಿದ್ಧತೆ ನಡೆಸಿರುವ ಶಿಕ್ಷಕರು ಸಮುದಾಯದ ಸಹಕಾರ ಪಡೆಯುತ್ತಿದ್ದಾರೆ.

    ಗ್ರಾಮೀಣ ಭಾಗದ ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್‌ನಂತಹ ಆಧುನಿಕ ತಂತ್ರಜ್ಞಾನ ಬಳಸಿ ಬೋಧಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಮುದಾಯದ ಸಹಭಾಗಿತ್ವದಲ್ಲಿ ಹೆಚ್ಚು ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ಆರಂಭಿಸಿರುವ ಕೀರ್ತಿ ತಾಲೂಕಿಗೆ ಸಲ್ಲುತ್ತದೆ. ಮದ್ನಾಳ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿ ಸಹಕರಿಸುತ್ತಿದ್ದಾರೆ. ಸುಸಜ್ಜಿತ ಮೂತ್ರ,ಶೌಚಗೃಹ, ಶುದ್ಧ ನೀರು ಹಾಗೂ ಇತರ ಸೌಲಭ್ಯ ಕಲ್ಪಿಸುವ ಯೋಜನೆ ಇದೆ.
    | ಶರಣಪ್ಪ ತುಮರಿಕೊಪ ಮುಖ್ಯಶಿಕ್ಷಕ, ಸರ್ಕಾರಿ ಹಿಪ್ರಾ ಶಾಲೆ, ಮದ್ನಾಳ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts