ಜನಜಾಗೃತಿ ವೇದಿಕೆಗಳಾಗಲಿ

blank

ಕುಷ್ಟಗಿ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಶ್ವನಾಥ ಸೊಪ್ಪಿಮಠ

ಕುಷ್ಟಗಿ (ದಿ.ವಾಸಪ್ಪ ಮಾಸ್ತರ್ ವೇದಿಕೆ, ಹೂಲಗೇರಾ ) : ಸಾಹಿತ್ಯ ಸಮ್ಮೇಳನಗಳು ಜನಜಾಗೃತಿ ಮೂಡಿಸುವ ವೇದಿಕೆಗಳಾಗಬೇಕು ಎಂದು ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ್ ಹೇಳಿದರು.

ತಾಲೂಕಿನ ಹೂಲಗೇರಾ ಗ್ರಾಮದ ಎಂ.ಆರ್. ಪಾಟೀಲ್ ನಿವಾಸದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ 13ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಪರಂಪರೆ ಉದ್ದಕ್ಕೂ ಜಾತ್ಯತೀತ ಮನೋಭಾವದಿಂದ ಜೀವಿಸಬೇಕೆಂಬ ಸಂದೇಶ ನೀಡುತ್ತ ಬರಲಾಗಿದೆ. ಸಾಹಿತ್ಯ ಎಂದರೆ ಬರವಣಿಗೆ ಮಾತ್ರವಲ್ಲ. ಜನಪದರ ನಾಲಿಗೆಯಿಂದ ಹೊರಬಂದ ಪದಗಳೂ ಸಾಹಿತ್ಯವೇ ಆಗಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಆಯಾ ಭಾಗದ ಪ್ರಮುಖ ಕಲೆಗಳಿಗೆ ಮಹತ್ವ ನೀಡಿ ವೇದಿಕೆ ಒದಗಿಸುವ ಕಾರ್ಯವಾಗಬೇಕಿದೆ. ಈ ಭಾಗದ ಬಯಲಾಟ ಕಲೆಗೆ ಸಮ್ಮೇಳನದಲ್ಲಿ ವೇದಿಕೆ ಒದಗಿಸಬೇಕಿತ್ತು. ಇದರಿಂದ ಬಯಲಾಟ ಕಲಾವಿದರು ಸಂತೃಪ್ತರಾಗುತ್ತಿದ್ದರು. ಮುಂದಿನ ದಿನಗಳಲ್ಲಿ ವೇದಿಕೆ ಒದಗಿಸಿಕೊಟ್ಟಲ್ಲಿ ಖರ್ಚು ವೆಚ್ಚದ ಜವಾಬ್ದಾರಿಯನ್ನು ಅಕಾಡೆಮಿಯೇ ವಹಿಸಲಿದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಎಲ್ಲ ಕ್ಷೇತ್ರ ಹಾಗೂ ಸ್ಥಳಗಳಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕಿದೆ. ತಮಿಳುನಾಡು, ಕೇರಳ ಇತರ ರಾಜ್ಯಗಳ ಸಂಸದರು ಹಿಂದಿ ಭಾಷೆ ಗೊತ್ತಿದ್ದರೂ ಸಂಸತ್ತಿನಲ್ಲಿ ಅವರವರ ಮಾತೃಭಾಷೆಯಲ್ಲಿಯೇ ಮಾತನಾಡುತ್ತಿದ್ದಾರೆ. ನಮ್ಮ ರಾಜ್ಯದ ಸಂಸದರೂ ಕನ್ನಡದಲ್ಲಿಯೇ ಮಾತನಾಡಲು ನಿರ್ಣಯಿಸಿದ್ದೇವೆ ಎಂದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಕನ್ನಡ ಭಾಷೆ ಬಗ್ಗೆ ಅಭಿಮಾನವಿರಬೇಕು. ಅನ್ಯ ಭಾಷಿಕರ ಜತೆ ಅವರ ಭಾಷೆಯಲ್ಲಿಯೇ ವ್ಯವಹರಿಸುವುದು ಹೆಚ್ಚಾಗುತ್ತಿದೆ. ಇದು ಕನ್ನಡಿಗರ ದೌರ್ಬಲ್ಯವೇ ಸರಿ. ನಮ್ಮತನ ಮರೆಯುವ ಕಾರ್ಯವಾಗಬಾರದು ಎಂದ ಅವರು, ಭಾಷಣದುದ್ದಕ್ಕೂ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದು ಕಂಡುಬಂತು. ಸಮ್ಮೇಳನ ಆಯೋಜನೆಗೆ ಯಾರಿಂದಲೂ ಹಣ ಪಡೆದಿಲ್ಲ. ಗ್ರಾನೈಟ್ ಫ್ಯಾಕ್ಟರಿ ಮಾಲೀಕರು ಸಹ ಒಬ್ಬರನ್ನು ಹೊರತುಪಡಿಸಿ ತಲಾ 11ಸಾವಿರ ರೂ. ಮಾತ್ರ ನೀಡಿದ್ದಾರೆಯೇ ವಿನಃ ಅವರಿಂದಲೇ ಸಮ್ಮೇಳನ ನಡೆದಿಲ್ಲ. ಆಪಾದನೆ ಬಂದರೆ ಮುಜುಗರಕ್ಕೀಡಾಗಬೇಕಾಗುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಜನರ ಪ್ರತಿಕ್ರಿಯೆ ಇಲ್ಲದೆ ರಾಜಕಾರಣ ಎತ್ತೆತ್ತಲೋ ಸಾಗುತ್ತಿದೆ. ಜನರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕು. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಿದ್ದರಿಂದ ತಾಲೂಕಿನಲ್ಲಿ 41ಇಂಗ್ಲಿಷ್ ಮಾಧ್ಯಮದ ಶಾಲೆಗಳು ಹುಟ್ಟಿಕೊಂಡಿವೆ. ಕನ್ನಡ ತಾಯಿ ಭಾಷೆಯಾದರೆ ಆಂಗ್ಲ ಬದುಕುವ ಭಾಷೆಯಾಗಬೇಕಿದೆ. ಈ ನಿಟ್ಟಿನಲ್ಲಿ ಇಂಗ್ಲಿಷನ್ನು 2ನೇ ಭಾಷೆಯನ್ನಾಗಿ ಕಲಿಸಬೇಕಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಸಾಹಿತ್ಯ ಪರಿಷತ್ ಎಲ್ಲ ಜಾತಿ, ಧರ್ಮಕ್ಕೆ ಸೇರಿದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಕನ್ನಡಿಗರೆಲ್ಲರ ಸ್ವಾಭಿಮಾನದ ಕಾರಣದಿಂದಾಗಿ ಸಮ್ಮೇಳನಗಳು ಅದ್ದೂರಿಯಾಗಿ ನಡೆಯುತ್ತಿವೆ. ಹೂಲಗೇರಾ ಗ್ರಾಮಸ್ಥರ ಶ್ರಮ ಹಾಗೂ ಕನ್ನಡ ಮನಸ್ಸುಗಳ ಸಹಕಾರದಿಂದ ತಾಲೂಕು ಮಟ್ಟದ ಸಮ್ಮೇಳನ ಯಶಸ್ವಿಯಾಗಿದೆ ಎಂದರು.

ಮಾಜಿ ಶಾಸಕರಾದ ಕೆ.ಶರಣಪ್ಪ, ಹಸನಸಾಬ ದೋಟಿಹಾಳ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶೇಖರಗೌಡ ಸರನಾಡಗೌಡ್ರ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ, ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬಾಕಳೆ, ಗ್ರಾಪಂ ಅಧ್ಯಕ್ಷೆ ಕವಿತಾ ಚವ್ಹಾಣ್, ಉಪಾಧ್ಯಕ್ಷೆ ಶಾಂತಮ್ಮ ಕುಂಟಗೌಡ್ರ, ಅಭಿವೃದ್ಧಿ ಅಧಿಕಾರಿ ಆನಂದ ಎಲಿಗಾರ, ಜಿಪಂ ಮಾಜಿ ಸದಸ್ಯ ಪ್ರಕಾಶ ರಾಠೋಡ್, ತಾಪಂ ಮಾಜಿ ಸದಸ್ಯ ಸುರೇಶ ಕುಂಟನಗೌಡ್ರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋಪಾಲರಾವ್ ಕುಲಕರ್ಣಿ, ನಿರ್ದೇಶಕ ಮುತ್ತಣ್ಣ ಕರಡಿ, ಇಳಕಲ್‌ನ ಸಾಹಿತಿ ಬಸವರಾಜ ಗವಿಮಠ, ಪ್ರಮುಖರಾದ ಮಹಾಂತಗೌಡ ಪಾಟೀಲ್, ಶೇಖರ ಹೊರಪ್ಯಾಟಿ ಇತರರು ಇದ್ದರು. ‘ಪುಲಿಗಿರಿ’ ಸ್ಮರಣ ಸಂಚಿಕೆ ಸೇರಿ ವಿವಿಧ ಸಾಹಿತಿಗಳ ಪುಸ್ತಕಗಳನ್ನು ಇದೇ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.

ಜನಜಾಗೃತಿ ವೇದಿಕೆಗಳಾಗಲಿ

ಸಪ್ಪೆ ಎನಿಸಿದ ಸರ್ವಾಧ್ಯಕ್ಷರ ಭಾಷಣ!

ಸಮ್ಮೇಳನದ ಸರ್ವಾಧ್ಯಕ್ಷ ಹನುಮಂತಪ್ಪ ಈಟಿಯವರ್ ಭಾಷಣ ಶುರುವಾಗುವಷ್ಟರಲ್ಲಿ ಬಹುತೇಕರು ಊಟಕ್ಕೆ ತೆರಳಿದ್ದರು. ಪೂರ್ವ ಮುದ್ರಿತ 15ಪುಟಗಳ ಭಾಷಣವನ್ನು ಸರ್ವಾಧ್ಯಕ್ಷ ಹನುಮಂತಪ್ಪ ಏಕತಾನತೆಯಿಂದ ಓದಿಮುಗಿಸಿದ್ದು ವೇದಿಕೆ ಮುಂದಿದ್ದ ಸಾಹಿತ್ಯಾಸಕ್ತರಲ್ಲಿ ನಿರಾಸೆಯನ್ನುಂಟು ಮಾಡಿತು. ಎಲ್ಲ ಕ್ಷೇತ್ರಗಳಲ್ಲಿಯೂ ವೈಯಕ್ತಿಕ ಹಿತಾಸಕ್ತಿಯೇ ಮುಂಚೂಣಿಯಲ್ಲಿ ಎದ್ದು ಕಾಣುತ್ತಿದೆ. ವೈಯಕ್ತಿಕ ಹಿತಚಿಂತನೆಯ ನಡೆಯಿಂದ ಸಾಮಾಜಿಕ ಹಿತಚಿಂತನೆಯ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಸಮ್ಮೇಳನ ನಡೆಯಬೇಕು. ಶಾಲೆಗಳ ಫಲಿತಾಂಶ ಹೆಚ್ಚಿಸಲು ಶಿಕ್ಷಕರ ಕೊರತೆ ಸೇರಿ ಅಗತ್ಯ ಸೌಕರ್ಯ ಕಲ್ಪಿಸಬೇಕು. 10ನೇ ತರಗತಿವರೆಗೆ ಮಾತೃಭಾಷೆಯಲ್ಲಿ ಕಲಿಸಿದರೆ ಮಕ್ಕಳಿಗೆ ತಮ್ಮ ಭಾವನೆ ಹಂಚಿಕೊಳ್ಳಲು ಅನುಕೂಲವಾಗುತ್ತದೆ. ವಿದ್ಯುತ್ ಉತ್ಪಾದನೆ ನೆಪದಲ್ಲಿ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ ಎಂಬ ಕೆಲ ಅಂಶಗಳನ್ನು ಹೊರತುಪಡಿಸಿದರೆ ಇಡೀ ಭಾಷಣ ಸಪ್ಪೆಯಾಗಿತ್ತೆಂಬ ಮಾತು ಸಮ್ಮೇಳನಕ್ಕೆ ಬಂದವರಿಂದ ಕೇಳಿಬಂತು.

ಜನಜಾಗೃತಿ ವೇದಿಕೆಗಳಾಗಲಿ

ನಾಡ ದೇವಿಯ ಮೆರವಣಿಗೆ ಜೋರು

ಹೂಲಗೇರಾಲ್ಲಿ ಕುಷ್ಟಗಿ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹನುಮಂತಪ್ಪ ಯಲ್ಲಪ್ಪ ಈಟಿಯವರ್, ನಾಡದೇವಿ ಭುವನೇಶ್ವರಿ ಹಾಗೂ ಸೇವಾಲಾಲ್ ಭಾವಚಿತ್ರ ಮೆರವಣಿಗೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶರಣಪ್ಪ ಗೋನಾಳ ಹಾಗೂ ಭಾರತ ಸೇವಾದಳದ ರಾಜ್ಯ ಉಪದಳಪತಿ ಕಾಶೀನಾಥ ಹಂದ್ರಾಳ ಚಾಲನೆ ನೀಡಿದರು. ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿತು. ಕನ್ನಡ ಧ್ವಜದ ಬಣ್ಣ ಬಳಿದ 13 ಎತ್ತಿನ ಬಂಡಿಗಳು, 101 ಕುಂಭ, ಡೊಳ್ಳು ಕುಣಿತ, ವಿವಿಧ ವೇಷಧಾರಿಗಳಿಂದ ಮೆರವಣಿಗೆಗೆ ಮೆರುಗು ಬಂದಿತು. 200 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ವಿಶೇಷವಾಗಿತ್ತು. ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರ ಡೊಳ್ಳು ಕುಣಿತ, ಕಾಲುಗಳಿಗೆ ಕೋಲು ಕಟ್ಟಿಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಹನುಮಂತನ ವೇಷಧಾರಿ ಹಾಗೂ ಕುದುರೆ ಕುಣಿತದಾರಿಗಳು ನೆರೆದವರ ಗಮನ ಸೆಳೆದರು.

ಇಕ್ಕಟ್ಟಿನ ದಾರಿಯಿಂದ ಕಿರಿಕಿರಿ

ನಾಡದೇವಿ ಮೆರವಣಿಗೆ ಸಾಗುವ ಇಕ್ಕಟ್ಟಾದ ದಾರಿಯಲ್ಲಿ ಚರಂಡಿ ನೀರು ಹರಿಯುತ್ತಿದ್ದರಿಂದ ವಿದ್ಯಾರ್ಥಿಗಳು, ಕುಂಭ ಹೊತ್ತ ಮಹಿಳೆಯರು, ಜನಪದ ಕಲಾತಂಡಗಳು ಹಾಗೂ ವೇಷಧಾರಿಗಳು ತೊಂದರೆ ಅನುಭವಿಸುವಂತಾಯಿತು.

 

ಜನಜಾಗೃತಿ ವೇದಿಕೆಗಳಾಗಲಿ

ಜನಜಾಗೃತಿ ವೇದಿಕೆಗಳಾಗಲಿ ಜನಜಾಗೃತಿ ವೇದಿಕೆಗಳಾಗಲಿ ಜನಜಾಗೃತಿ ವೇದಿಕೆಗಳಾಗಲಿ

Share This Article

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…