ಕುಷ್ಟಗಿ: ಪ್ರತಿಯೊಬ್ಬರೂ ಶಿಕ್ಷಿತರಾದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣವಾಗಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನ ಸಭಾ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಅನ್ನದಾನೇಶ್ವರ ಪಪೂ ಕಾಲೇಜಿನ ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಧನೆಗೆ ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಅದರಿಂದಲೇ ಬದುಕು ಹಸನಾಗುತ್ತದೆ. ಶಿಕ್ಷಣದ ಮಹತ್ವ ಅರಿತು ಪ್ರತಿಯೊಬ್ಬ ಪಾಲಕರು ಮಕ್ಕಳನ್ನು ಶಿಕ್ಷಕಿತನ್ನಾಗಿಸಬೇಕಿದೆ. ಶಿಕ್ಷಣಕ್ಕಾಗಿ ಮಾಡಿದ ಖರ್ಚು ವ್ಯರ್ಥವಾಯಿತೆಂಬ ಭಾವನೆ ಪಾಲಕರಲ್ಲಿ ಬರದಂತೆ ಮಕ್ಕಳೂ ಸಹ ಪರಿಶ್ರಮ ಪಡಬೇಕು. ಬಡ ಮಕ್ಕಳಿಗಾಗಿ ಹಲವು ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ಹಾಲಕೆರೆಯ ಶ್ರೀ ಅನ್ನದಾನ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದರು.
ಕಾಲೇಜು ಆಡಳಿತ ಮಂಡಳಿಯ ಚೇರ್‌ಮನ್ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯಿಂದ ಪಟ್ಟಣದಲ್ಲಿಯೂ ಕಾಲೇಜು ಆರಂಭಿಸಲಾಗಿದೆ. ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳ ಮಾರ್ಗದರ್ಶನಲ್ಲಿ ನಡೆಯುತ್ತಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದರು.
ಪ್ರಾಚಾರ್ಯ ಶ್ರೀಕಾಂತಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರಾದ ಮಹಾಂತಯ್ಯ ಹಿರೇಮಠ, ಮಹಾಂತಯ್ಯ ಅರಳೆಲೆಮಠ, ಭೀಮನಗೌಡಜಾಲಿಹಾಳ, ಅಭಿಷೇಕಗೌಡ ಮಾಲಿಪಾಟೀಲ್, ಅಂದಪ್ಪ ಬೀಳಗಿ, ಉಪನ್ಯಾಸಕರಾದ ಹನುಮಂತಪ್ಪ ಶಿರವಾರ, ವಿಶ್ವನಾಥ ತೊಂಡಿಹಾಳ, ಸುನಿಲ್, ಸೌಂದರ್ಯ ಲೂತಿಮಠ, ಸೋಮಣ್ಣ ಚಿಟಗಿ, ಚೇತನಮೂರ್ತಿ ಹಿರೇಮಠ, ಬಸನಗೌಡ ಸಂಕನಾಳ, ಸೌಮ್ಯ, ಭವಾನಿ, ಸಿಬ್ಬಂದಿ ಮಂಜುನಾಥ ನಾಯಕ್, ರಾಮಚಂದ್ರಪ್ಪ, ವಿದ್ಯಾರ್ಥಿ ಪ್ರತಿನಿಧಿ ರೋಹಿತ್ ಕಲಕೇರಿ, ಬಸಮ್ಮ ಬಳೂಟಗಿ ಇತರರಿದ್ದರು.