ಅಭಿವೃದ್ಧಿ ವಿಚಾರದಲ್ಲಿ ಬಯ್ಯಪೂರ ನಿರ್ಲಕ್ಷ್ಯ- ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪ

ಕುಷ್ಟಗಿ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪೂರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು.

ಶಾಸಕರ ಇಚ್ಚಾಶಕ್ತಿ ಕೊರತೆಯಿಂದ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಅಧಿಕಾರಕ್ಕೆ ಬಂದು ವರ್ಷ ಗತಿಸುತ್ತ ಬಂದರೂ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುತ್ತಿಲ್ಲ. ಪಟ್ಟಣದಲ್ಲಿ ತಲೆದೋರಿರುವ ಕುಡಿವ ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಬದಲು ಕುಂಟು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡುವ ಬದಲು 20ದಿನ ನೀರು ಸಿಗಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಪಟ್ಟಣಕ್ಕೆ ಪೂರೈಕೆಯಾಗುವ ನೀರಿನ ಮೋಟರ್ ದುರಸ್ತಿಗೊಳಿಸಿ ಪಟ್ಟಣವಾಸಿಗಳಿಗೆ ನೀರು ಪೂರೈಸುವ ಕಾರ್ಯವನ್ನು ಪುರಸಭೆ ಸದಸ್ಯರು ಮಾಡುತ್ತಿದ್ದಾರೆ. ಶಾಸಕರಾಗಿ ಸಮಸ್ಯೆ ಬಗೆಹರಿಸುವುದು ಬಿಟ್ಟು, ಕೈಚೆಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಪಟ್ಟಣಕ್ಕೆ ನೀರು ಪೂರೈಸುವಲ್ಲಿ ಶಾಸಕ ಅಮರೇಗೌಡರ ಕೊಡುಗೆ ಶೂನ್ಯವಾಗಿದೆ ಎಂದು ಆರೋಪಿಸಿದರು.

ಆಡಳಿತ ಮಂಡಳಿ ರಚನೆಯಾಗದಿರುವುದು ಹಾಗೂ ಶಾಸಕರ ಮೇಲ್ವಿಚಾರಣೆ ಇಲ್ಲದೇ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್ ಸಹ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸದಸ್ಯರ ಮಾತಿಗೂ ಬೆಲೆ ಕೊಡದೇ ಉದಾಸೀನ ತೋರುತ್ತಿರುವ ಮುಖ್ಯಾಧಿಕಾರಿ ಚುನಾವಣೆ ನಂತರ ಪರಿಣಾಮ ಎದುರಿಸಲಿದ್ದಾರೆ ಎಂದು ಹರಿಹಾಯ್ದರು.

ಜಿಪಂ ಸದಸ್ಯ ಕೆ.ಮಹೇಶ, ವಿಜಯನಾಯಕ್, ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವರ್ ಅತ್ತಾರ, ಪುರಸಭೆ ಸದಸ್ಯರಾದ ಜಿ.ಕೆ.ಹಿರೇಮಠ, ಕಲ್ಲೇಶ ತಾಳದ್, ಜೆ.ಜಿ.ಆಚಾರ ಇತರರು ಇದ್ದರು.

ಈ ಹಿಂದೆ ಕೆ.ಶರಣಪ್ಪ ಹಾಗೂ ನನ್ನ ಅವಧಿಯಲ್ಲಿ ಕುಷ್ಟಗಿ ಪಟ್ಟಣಕ್ಕೆ ನೀರು ತರುವ ಕಾರ್ಯ ನಡೆಯಿತು. ಅದೇ ವೇಳೆ ಚುನಾವಣೆ ಘೋಷಣೆಯಾಗಿ ಬಯ್ಯಪುರ ಆಯ್ಕೆಯಾದರು. ಈ ಕೆಲಸವನ್ನು ತಾವೇ ಮಾಡಿರುವುದಾಗಿ ಹೇಳಿಕೊಂಡರು. ಬೆಂಬಲ ಬೆಲೆ ಯೋಜನೆಯನ್ವಯ ತೊಗರಿ ಖರೀದಿಗೆ ಸಂಬಂಧಿಸಿಯೂ ಮುತುವರ್ಜಿ ವಹಿಸಲಿಲ್ಲ.
|ದೊಡ್ಡನಗೌಡ ಪಾಟೀಲ್ ಮಾಜಿ ಶಾಸಕ

Leave a Reply

Your email address will not be published. Required fields are marked *