ಕುಷ್ಟಗಿ: ಬಯಲಾಟ ಅಕಾಡೆಮಿಯ 2023-24ನೇ ಸಾಲಿನ ಬಯಲಾಟ ಗೌರವ ಪ್ರಶಸ್ತಿಗೆ ಹಿರೇಮನ್ನಾಪುರದ ರಂಗ ಕಲಾವಿದ ಇಮಾಮಸಾಬ ಕೋಳೂರು ಆಯ್ಕೆಯಾಗಿದ್ದಾರೆ. ರಂಗ ಕಲೆಯಲ್ಲಿ ನಟನಾಗಿ, ನಿರ್ದೇಶಕರಾಗಿ, ಗಾಯಕರಾಗಿ ಸೇವೆ ಸಲ್ಲಿಸಿರುವ 69 ವರ್ಷದ ಇಮಾಮಸಾಬ ಕೋಳೂರು ಇಳಿ ವಯಸ್ಸಿನಲ್ಲಿಯೂ ಕಲಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ರಂಗ ಕಲಾವಿದರಾಗಿದ್ದ ತಂದೆ ಸಣ್ಣ ಹುಸೇನಸಾಬರ ಒಡನಾಟದಿಂದ ರಂಗ ಕಲೆಯ ಬಗ್ಗೆ ಆಕರ್ಷಿತರಾಗಿ 1976ರರಲ್ಲಿ ‘ದ್ರೌಪದಿ ಸ್ವಯಂವರ’ ಬಯಲಾಟದ ಮೂಲಕ ಸ್ವತಂತ್ರ ರಂಗ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದರು. ರತಿ ಕಲ್ಯಾಣ, ಲವ-ಕುಶ, ಪ್ರಮೀಳಾದೇವಿ, ಬಬ್ರುವಾಹನ, ಸುಭದ್ರ ಕಲ್ಯಾಣ, ಕರ್ಣಾರ್ಜುನರ ಕಾಳಗ ಸೇರಿದಂತೆ 150ಕ್ಕೂ ಹೆಚ್ಚು ದೊಡ್ಡಾಟಗಳಲ್ಲಿ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಈವರೆಗೆ ಹಲವು ಪೌರಾಣಿಕ, ಸಾಮಾಜಿಕ ನಾಟಕಗಳ ನಿರ್ದೇಶನ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ರಂಗ ಗೀತೆ ಗಾಯನ, ನಟನೆಯ ತರಬೇತಿ ನೀಡುತ್ತಾ ಬಂದಿದ್ದಾರೆ. ಐತಿಹಾಸಿಕ ಉತ್ಸವಗಳು, ಸಾಹಿತ್ಯ ಸಮ್ಮೇಳನಗಳಲ್ಲಿ ರಂಗ ಕಲೆ ಪ್ರದರ್ಶಿಸಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಕಾಯಕ ದತ್ತಿ ಪ್ರಶಸ್ತಿ, ಸಿಜಿಕೆ ರಂಗ ಪ್ರಶಸ್ತಿ ಹಾಗೂ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಬಾಲ್ಯದಿಂದಲೇ ತಂದೆಯವರ ಒಡನಾಟದಿಂದ ರಂಗ ಕಲೆಯತ್ತ ಆಕರ್ಷಿತನಾದೆ. ವಿವಿಧ ಜಿಲ್ಲೆಗಳಿಗೆ ಸಂಚರಿಸಿ ನಾಟಕ ನಿರ್ದೇಶನ ಮಾಡುತ್ತಿದ್ದೇನೆ. ರಂಗ ಗೀತೆ ಹಾಗೂ ನಟನೆಯ ಮೂಲಕ ಗುರುತಿಸಿಕೊಂಡಿದ್ದೇನೆ. ಕಲಾ ಸೇವೆ ಗುರುತಿಸಿ ಬಯಲಾಟ ಗೌರವ ಪ್ರಶಸ್ತಿ ನೀಡಿರುವುದು ಕಲಾ ಸೇವೆಗೆ ಉತ್ತೇಜನ ನೀಡಿದೆ.
ಇಮಾಮಸಾಬ ಕೋಳೂರು