ಶೌಚಗೃಹ ಸ್ವಚ್ಛ ಮಾಡಿದ ಮುಖ್ಯಶಿಕ್ಷಕ

ಕುರುಗೋಡು: ಸಿರಿಗೇರಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸತೀಶ್‌ಕುಮಾರ್ ಶಾಲೆಯಲ್ಲಿರುವ ಶೌಚಗೃಹ ಸ್ವಚ್ಛ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಶಾಲೆಯಲ್ಲಿ 1 ರಿಂದ 7ನೇ ತರಗತಿಗಳಿದ್ದು, ಮೂರು ಶೌಚಗೃಹಗಳಿವೆ. ನೀರಿನ ಲಭ್ಯತೆಯೂ ಚೆನ್ನಾಗಿದೆ. ಶೌಚಗೃಹ ಸ್ವಚ್ಛ ಮಾಡುವುದು ಮುಖ್ಯಶಿಕ್ಷಕ ಸತೀಶ್ ಕಾಯಕವಾಗಿದೆ. ಇದು ಮಕ್ಕಳಿಗೆ ಮಾದರಿಯಾಗಿದ್ದು, ಪ್ರತಿದಿನ ಶೌಚಕ್ಕೆ ಹೋಗಿ ಬಂದ ನಂತರ ನೀರು ಹಾಕಿ ತೊಳೆದು ಬರುತ್ತಾರೆ. ಆದಾಗ್ಯೂ ಪ್ರತಿ ಶನಿವಾರ ಮುಖ್ಯಶಿಕ್ಷಕ ಸತೀಶ್ ಸ್ವ ಇಚ್ಛೆಯಿಂದ ಶೌಚಗೃಹ ಸ್ವಚ್ಛತೆ ಕಾರ್ಯ ಮುಂದುವರಿಸಿದ್ದಾರೆ.

ಸರ್ಕಾರ ಶೌಚಗೃಹ ಸ್ವಚ್ಛತೆಗೆ ಸಿಬ್ಬಂದಿ ನೇಮಿಸದ ಕಾರಣ ಬಹುತೇಕ ಶಾಲೆಗಳಲ್ಲಿ ಶೌಚಗೃಹಗಳು ಬಳಕೆ ಇಲ್ಲದೆ ಹಾಳಾಗುತ್ತಿವೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಅಲ್ಲದೇ ನಮ್ಮ ಕೆಲಸ ನಾವು ಮಾಡುವುದರಿಂದ ಸ್ವಚ್ಛ ಭಾರತ್ ಮಿಷನ್‌ಗೆ ಅರ್ಥ ಬರುತ್ತದೆ. ಕೆಲ ಅನಿವಾರ್ಯ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಗೃಹ ಸ್ವಚ್ಛಗೊಳಿಸಲಾಗುತ್ತದೆ. ಅದನ್ನೆ ಸಾರ್ವಜನಿಕರು, ಪಾಲಕರು, ಮಾಧ್ಯಮಗಳು ಟೀಕಿಸುತ್ತಿರುವುದು ಬೇಸರದ ಸಂಗತಿ ಎನ್ನುತ್ತಾರೆ ಮುಖ್ಯಶಿಕ್ಷಕ ಸತೀಶ್.