ಮನೆಗಳ ತೆರವಿಗೆ ವಿರೋಧ

ಮುದ್ದಟನೂರಿನ 3ನೇ ವಾರ್ಡ್‌ನ ನಿವಾಸಿಗಳಿಂದ ಧರಣಿ

ಕುರುಗೋಡು: ಮನೆಗಳ ತೆರವು ವಿರೋಧಿಸಿ ಮುದ್ದಟನೂರಿನ 3ನೇ ವಾರ್ಡ್‌ನ ನಿವಾಸಿಗಳು ಗ್ರಾಪಂ ಮುಂದೆ ಅನಿರ್ದಿಷ್ಟಾವಧಿ ಧರಣಿ ಸೋಮವಾರದಿಂದ ಆರಂಭಿಸಿದರು.

ಹುಸೇನ್‌ಸಾಬ್ ಮಾತನಾಡಿ, 1999ರಲ್ಲಿ ಸರ್ಕಾರ ಸ.ನಂ.295/ಬಿ ನಲ್ಲಿ ಎರಡು ಎಕರೆ ಭೂ ಖರೀದಿಸಿ ಸುಮಾರು 53 ನಿರ್ಗತಿಕ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಆಶ್ರಯ ಯೋಜನೆ ವಿಸ್ತರಿಸಿದೆ. ಗ್ರಾಪಂಗೆ ಕರ ಪಾವತಿಸುತ್ತಿದ್ದೇವೆ. ಆದರೆ, ಖಾಸಗಿ ಜಮೀನು ಮಾಲೀಕರು ಸ.ನಂ.297ರಲ್ಲಿ 2 ಎಕರೆ ಭೂಮಿ ಸರ್ಕಾರಕ್ಕೆ ನೀಡಿದ್ದು, ನಿವಾಸಿಗಳು ಸ.ನಂ.295/ಬಿನಲ್ಲಿ ಅಕ್ರಮ ಪ್ರವೇಶ ಮಾಡಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಜಮೀನು ಮಾಲೀಕರಿಗೆ ಬೇರೆಡೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.

ವಾಸಿ ಅನ್ನಪೂರ್ಣಮ್ಮ ಮಾತನಾಡಿ, ಮಾಲೀಕರು ತಮ್ಮ ಜಮೀನು ಎಂದು ತಂತಿಬೇಲಿ ಹಾಕಿದ್ದಾರೆ. ಇದರಿಂದ ಭೀತಿಗೊಂಡ ನಿವಾಸಿಗಳು ಗ್ರಾಪಂ, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನಿವಾಸಿಗಳು ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ತಹಸೀಲ್ದಾರ್ ದಯಾನಂದ ಪಾಟೀಲ್, ಇಒ ಶಿವಪ್ಪ ಸುಬೇದಾರ್, ಕಂದಾಯ ಪರಿವೀಕ್ಷಕ ಕೆ.ಈಶ್ವರ, ಪಿಡಿಒ ಆದೇಪ್ಪ, ಗ್ರಾಮಲೆಕ್ಕಾಧಿಕಾರಿ ಡಿ.ಸುರೇಂದ್ರ ಕುಮಾರ ಸೇರಿ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳ ಮನವಿ ಸ್ವೀಕರಿಸಿದರು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವ ಕ್ರಮ ತೆಗೆದುಕೊಳ್ಳಲಾಗದು. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಧರಣಿ ಕೈಬಿಟ್ಟರು.

ನಿವಾಸಿಗಳಾದ ಜಲಾಲ್ ಬೀ, ಭಾನಮ್ಮ, ರಾಜಮ್ಮ, ರಂಜಾನ್‌ಸಾಬ್, ರತ್ನಮ್ಮ, ಕುಂಟನಾಗಮ್ಮ, ಬೈಲೂರು ಬಸವ, ಹಸನ್ ಸಾಬ್, ಚೌಡ್ಕಿ ರಮೇಶ, ಬಿಳಿಕಲ್ಲಪ್ಪ, ಚೌಡ್ಕಿ ವೀರೇಶ, ಯರೆಪ್ಪ ಇತರರು ಇದ್ದರು.