ಕುರುಗೋಡು: ಪಟ್ಟಣದ ಹರಿಕೃಪಾ ಕಾಲನಿಯಲ್ಲಿರುವ ಸರ್ಕಾರಿ ಶಾಲೆ ಕಟ್ಟಡ ವರ್ಷವಾದರೂ ದುರಸ್ತಿಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಕಾಯಂ ಸೂರಿಲ್ಲದಂತಾಗಿದ್ದು, ಪಿಯು ಕಾಲೇಜಿನ ಕೊಠಡಿಯಲ್ಲಿ ಪಾಠ ಬೋಧಿಸಲಾಗುತ್ತಿದೆ.
ಪಟ್ಟಣದ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೂಲಿ ಕಾರ್ಮಿಕರು, ಚಿಂದಿ ಆಯುವವರು ಮತ್ತು ಬಡತನ ಹಿನ್ನೆಲೆ ಇರುವ ಮಕ್ಕಳೇ ಹೆಚಾಗಿದ್ದಾರೆ. ಸದ್ಯ 1ರಿಂದ 5ನೇ ತರಗತಿಯಲ್ಲಿ ಸುಮಾರು 106 ವಿದ್ಯಾರ್ಥಿಗಳಿದ್ದು, ಐದು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ವರ್ಷ ಮುಂಗಾರು ಮಳೆಗೆ ಶಾಲೆಗೆ ಅಪಾರ ಪ್ರಮಾಣದ ನೀರು ನುಗ್ಗಿ ಕಟ್ಟಡದ ಬುನಾದಿಗೆ ಬಹುತೇಕ ಹಾನಿಯಾಗಿತ್ತು. ಕೊಠಡಿ ಕುಸಿದು ಮಕ್ಕಳ ದಾಖಲಾತಿ ಪುಸ್ತಕ ಸೇರಿದಂತೆ ಇತರ ಪರಿಕರ ಸಂಪೂರ್ಣ ಹಾಳಾಗಿದ್ದವು. ಗೋಡೆಯೂ ಅಲ್ಲಲ್ಲಿ ಬಿರುಕು ಬಿಟ್ಟಿದ್ದರಿಂದ ಶಿಕ್ಷಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಪಕ್ಕದಲ್ಲಿರುವ ಪಿಯು ಕಾಲೇಜಿನ ಮೂರು ಕೊಠಡಿ ಪಡೆದು ಮಕ್ಕಳ ಶಿಕ್ಷಣಕ್ಕೆ ಅಡಚಣೆಯಾಗದಂತೆ ನೋಡಿಕೊಂಡಿದ್ದರು.
ಸದ್ಯ ಶಾಲೆ ಆರಂಭವಾದರೂ ದುರಸ್ತಿ ಕಾರ್ಯ ನಡೆದಿಲ್ಲ. ಇದರಿಂದ ಇರುವ 3 ಕೊಠಡಿಗಳ ಪೈಕಿ ಒಂದರಲ್ಲಿ ಕಾರ್ಯಾಲಯ ಇದ್ದು, ಉಳಿದ ಎರಡು ಕೊಠಡಿಯಲ್ಲೇ 106 ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಬಯಲಲ್ಲೇ ಬೋಧಿಸುವ ಅನಿವಾರ್ಯತೆ ಎದುರಾಗಿದೆ.
ಸ್ವಚ್ಛತೆ ಮರೀಚಿಕೆ
ಸದ್ಯದ ಶಾಲಾ ಕೊಠಡಿಗಳ ಸುತ್ತ ಗಿಡಗಂಟಿ ಬೆಳೆದಿದ್ದು, ಎಲ್ಲೆಂದರಲ್ಲಿ ಬಿಸಿ ಊಟದ ತ್ಯಾಜ್ಯ ಎಸೆಯಲಾಗಿದೆ. ಇದರಿಂದ ಹುಳು- ಉಪ್ಪಟೆಯ ಆತಂಕವೂ ಎದುರಾಗಿದೆ. ಶೌಚಗೃಹದ ಕಟ್ಟಡ ಬಿರುಕು ಬಿಟ್ಟಿರುವ ಜತೆಗೆ ನಿರ್ವಹಣೆ ಇಲ್ಲದೆ. ಗಬ್ಬುನಾರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಶೌಚಕ್ಕೂ ಬಯಲಲ್ಲೇ ತೆರಳಬೇಕಿದೆ.
ಜನಪ್ರತಿನಿಧಿಗಳಿಂದ ಇಲ್ಲ ಸ್ಪಂದನೆ
ಶಾಲೆಯ ಪರಿಸ್ಥಿತಿ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಶಾಸಕ ಜೆ.ಎನ್.ಗಣೇಶ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಆಗಸ್ಟ್‌ನಿಂದ ಈವರೆಗೆ ಡಿಸಿ, ಜಿಪಂ ಸಿಇಒ, ಡಿಡಿಪಿಐ, ಬಿಇಒ ಕಚೇರಿಗೆ ಮನವಿ ಸಲ್ಲಿಸಲಾಗಿದ್ದು, ಸ್ಥಳ ಪರಿಶೀಲನೆಗೆ ಪ್ರಕ್ರಿಯೆ ಸೀಮಿತವಾಗಿದೆ ಹೊರೆತು ಅನುದಾನ ದೊರೆತಿಲ್ಲ.
ಕುರುಗೋಡಿನ ಹರಿಕೃಪಾ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಠಡಿ ಮುಂಭಾಗದಲ್ಲಿ ಬುನಾದಿ ಕುಸಿದಿರುವುದು.
ಮಕ್ಕಳಿಗೆ ಪಾಠ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಸದ್ಯಕ್ಕೆ ಕೊಠಡಿ ಸಂಖ್ಯೆ ಹೆಚ್ಚಿಸಲಾಗುವುದು. ಕೆಕೆಆರ್‌ಡಿಬಿ ಅನುದಾನದಲ್ಲಿ ಶಾಲೆಯ ಕಟ್ಟಡ ದುರಸ್ತಿ ಮಾಡಲಾಗುವುದು. | ಜೆ.ಎನ್.ಗಣೇಶ್ ಶಾಸಕ, ಕಂಪ್ಲಿ
ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಈ ಬಗ್ಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಸೌಲಭ್ಯ ಕಲ್ಪಿಸಬೇಕಿದ್ದು ಶೀಘ್ರ ಸಮಸ್ಯೆ ಪರಿಹರಿಸಲಾಗುವುದು. | ನರಸಪ್ಪ ತಹಸೀಲ್ದಾರ್, ಕುರುಗೋಡು
ಶಾಲೆಯ ಸಮಸ್ಯೆ ಬಗ್ಗೆ ಶಾಸಕ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಪರಿಶೀಲಿಸಿದ್ದಾರೆ. ಸದ್ಯಕ್ಕೆ ಮಕ್ಕಳ ಶಿಕ್ಷಣಕ್ಕೆ ಅನನುಕೂಲ ಆಗುತ್ತಿದೆ. | ಬಸವರಾಜ್ ಶಿಕ್ಷಕ, ಹರಿಕೃಪಾ ಕಾಲನಿ ಸರ್ಕಾರಿ ಶಾಲೆ, ಕುರುಗೋಡು