ಕುರುಗೋಡು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಕಡೆಗೆ ಸಾಗುತ್ತಿದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ದೇಶ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯರ‌್ರಂಗಳಿ ತಿಮ್ಮಾರೆಡ್ಡಿ ಹೇಳಿದರು.
ಮೋದಿ ಸರ್ಕಾರ 11ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿರುವ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಅವರ ನಿವಾಸದಲ್ಲಿ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಭಾನುವಾರ ಮಾತನಾಡಿದರು. ಕೇಂದ್ರ ಸರ್ಕಾರ ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರ ತಲಾ ಆದಾಯ ಹೆಚ್ಚಿಸುತ್ತಿದೆ. ದೇಶದ ಭದ್ರತೆ, ವಿದೇಶಾಂಗ ನೀತಿಯಲ್ಲಿ ಭಾರತ ಸಾಕಷ್ಟು ಏಳಿಗೆ ಸಾಧಿಸಿದೆ. ಹೀಗಾಗಿ ಪ್ರತಿಯೊಬ್ಬರೂ ಪಕ್ಷ ಸಂಘಟನೆ ಮೂಲಕ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವಂತೆ ಶ್ರಮಿಸಬೇಕು ಎಂದರು.
ಮುಖಂಡ ದರಪ್ಪನಾಯಕ ಮಾತನಾಡಿ, ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ಸೈನಿಕರಿಗೆ ಸ್ವದೇಶಿ ಅಸ್ತ್ರ ನೀಡುತ್ತಿದೆ. ಇದರಿಂದ ಬೇರೆ ದೇಶದ ಮೇಲೆ ಅವಲಂಬನೆ ಕ್ಷೀಣಿಸಿದೆ. ರಷ್ಯಾ ಮತ್ತು ಭಾರತವು ಜಂಟಿಯಾಗಿ ನಿರ್ಮಿಸಿರುವ ಬ್ರಹ್ಮೋಸ್ ಕ್ಷಿಪಣೆ ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯ ಸಾಬೀತು ಪಡಿಸಿದೆ. ಹೀಗಾಗಿ ವಿವಿಧ ದೇಶಗಳಿಂದ ಕ್ಷಿಪಣಿ ಬೇಡಿಕೆ ಬಂದಿದ್ದು, ಇದರಿಂದ ಭಾರತಕ್ಕೆ ಲಾಭವಾಗಲಿದೆ. ಇದಕ್ಕೆ ಪ್ರಧಾನಿ ಮೋದಿ ಮೂಲ ಕಾರಣ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಾಳಿ ಶಂಕ್ರಪ್ಪ, ಪ್ರಧಾನ ಕಾರ್ಯದರ್ಶಿ ಸೋಮನಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣಪಾಲ ಐನಾಥ ರೆಡ್ಡಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಲುವಾದಿ ರಾಘವೇಂದ್ರ, ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಇತರರಿದ್ದರು.