ಕುಂದೂರ ಶೇಂಗಾ ಬ್ರ್ಯಾಂಡ್ ಮಾರುಕಟ್ಟೆಗೆ

ಬಂಕಾಪುರ: ಪ್ರಗತಿಪರ ರೈತರನ್ನು ಹೊಂದಿರುವ ಕುಂದೂರ ಗ್ರಾಮ ಶೇಂಗಾ ಬೀಜ ಉತ್ಪಾದನೆಗೆ ಹೆಸರುವಾಸಿ. ಕುಂದೂರ ಶೇಂಗಾ ಬೀಜ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ತರುವುದಕ್ಕೆ ತೀರ್ವನಿಸಲಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಸಮೀಪದ ಕುಂದೂರ ಗ್ರಾಮದ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ವಣಗೊಂಡ ನಾಲ್ಕು ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಂದೂರ ಗ್ರಾಮದ ಶೇಂಗಾ ಬೀಜಕ್ಕೆ ಮಾರುಕಟ್ಟೆ ಸಮಸ್ಯೆ ಇದೆ. ಇಲ್ಲಿನ ಶೇಂಗಾ ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶದಿಂದ ತಳಿ ಸಂರಕ್ಷಣೆ ಮತ್ತು ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಅದಕ್ಕೆ ಬೇಕಾಗುವ ಸಂಸ್ಕರಣಾ ಘಟಕ ಇಲ್ಲಿಯೇ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಶಿಕ್ಷಣವಿಲ್ಲದ ವ್ಯಕ್ತಿ ಆರ್ಥಿಕವಾಗಿ ಸಬಲನಾಗಲು ಸಾಧ್ಯವಿಲ್ಲ. ಸುಶಿಕ್ಷಿತ ಮಕ್ಕಳು ಮತ್ತು ಯುವಕರು ನಾಡಿನ ಭವಿಷ್ಯವಾಗಿದ್ದು, ಅವರಿಗೆ ಪ್ರಾಥಮಿಕ ಶಿಕ್ಷಣ ನೀಡುವುದು ಪಾಲಕರ ಕರ್ತವ್ಯವಾಗಿದೆ. ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಕಳೆದ ಹತ್ತು ವರ್ಷದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಸುಮಾರು 20 ಕೋಟಿ, ಪಿಯು, ಪದವಿ ಮತ್ತು ಡಿಪ್ಲೊಮಾ ಕಾಲೇಜ್​ಗಳಿಗೆ 25 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ಶಿವಕ್ಕ ಮರೆಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಶೋಭಾ ಗಂಜಿಗಟ್ಟಿ, ತಾ.ಪಂ. ಸದಸ್ಯರಾದ ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಮುಖಂಡರಾದ ಪಾಲಾಕ್ಷಪ್ಪ ಹಾವಣಗಿ, ಶಂಬಣ್ಣ ಕಡಕೋಳ, ಮಹೇಶ ಪಾಟೀಲ, ಶೇಖಪ್ಪ ಮರೆಮ್ಮನವರ, ಷಣ್ಮುಖಗೌಡ ಪಾಟೀಲ, ಮಂಗಳಾ ಜಾಡರ, ಪ್ರೇಮಾ ಕೂಡಲ, ಶಿವನಗೌಡ ಹೊಸಮನಿ, ಮಹಮ್ಮದಲಿ ದಿವಾನದಾರ, ಇಬ್ರಾಹಿಂಸಾಬ ನದಾಫ ಇತತರು ಇದ್ದರು. ಶಿಕ್ಷಕ ಎಚ್.ಎಚ್. ರಟ್ಟಿಹಳ್ಳಿ, ನವೀದ ಬಂಕಾಪುರ ಕಾರ್ಯಕ್ರಮ ನಿರ್ವಹಿಸಿದರು.

ಬೇಸಿಗೆಯೊಳಗೆ ರಸ್ತೆ ಕಾಮಗಾರಿ ಪೂರ್ಣ: ಕುಂದೂರ ಗ್ರಾಮದ ಅಭಿವೃದ್ಧಿಗಾಗಿ ಜಾಲಿಕಟ್ಟಿ ಸಿಸಿ ರಸ್ತೆಗೆ 10 ಲಕ್ಷ ರೂ., ಸಿದ್ಧಾರೂಢ ಮಠಕ್ಕೆ 5 ಲಕ್ಷ ರೂ., ಹನುಮಂತ ದೇವರ ದೇವಸ್ಥಾನಕ್ಕೆ 4 ಲಕ್ಷ ರೂ. ಅನುದಾನ ನೀಡಲಾಗಿದೆ. ಅಲ್ಲದೆ, ಬಂಕಾಪುರ-ತವರುಮೆಳ್ಳಳ್ಳಿ ರಸ್ತೆ ನಿರ್ವಣ, ಗುಡ್ಡದಚನ್ನಾಪುರ ಕುಂದೂರ ಸರಹದ್ದಿನ ರಸ್ತೆ ಅಭಿವೃದ್ಧಿಗೆ 80 ಲಕ್ಷ ರೂ. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಬೇಸಿಗೆಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಬೊಮ್ಮಾಯಿ ಹೇಳಿದರು.