ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಚಿಕ್ಕಮಗಳೂರು: ನಗರದಲ್ಲಿ ಮಾ.2 ಮತ್ತು 3ರಂದು ನಡೆಯುವ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದರು.

ಸಮ್ಮೇಳನಕ್ಕೆ ಕೇಂದ್ರ ಸಾಹಿತ್ಯ ಪರಿಷತ್​ನಿಂದ 10 ಲಕ್ಷ ರೂ. ನೀಡಿದ್ದು, ಎರಡು ದಿನ 400 ಜನರಿಗೆ ಉಪಾಹಾರ, ಕಾಫಿ, ಊಟದ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಗಣ್ಯರು ಉಳಿದುಕೊಳ್ಳಲು 6 ವಸತಿಗೃಹಗಳಲ್ಲಿ 115 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾರ್ಯಕಾರಿ ಸದಸ್ಯರು, ಜಿಲ್ಲಾಧ್ಯಕ್ಷರು, 5 ಗಡಿನಾಡ ಘಟಕಗಳ ಅಧ್ಯಕ್ಷರು ಸೇರಿ 44 ಜನ ಪದಾಧಿಕಾರಿಗಳು, 60 ಮಂದಿ ಲೇಖಕಿಯರು, ಕವಯತ್ರಿಯರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನ ಯಶಸ್ಸಿಗೆ ಮಹಿಳಾ ಸಂಘಟನೆಗಳ ಸಭೆ ನಡೆಸಲಾಗುವುದು ಎಂದರು.

ಸಮ್ಮೇಳನಾಧ್ಯಕ್ಷೆ ಡಾ. ಸುಧಾಮೂರ್ತಿ ಅವರನ್ನು ಹಳೇನಗರ ಠಾಣೆಯ ಸಮೀಪ ಗಣಪತಿ ದೇವಾಲಯದಿಂದ ವಿವಿಧ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಕಾರ್ಯಕ್ರಮ ನಡೆಯುವ ಕುವೆಂಪು ಕಲಾಮಂದಿರಕ್ಕೆ ಕರೆತರಲಾಗುವುದು. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಾಂಕೇತಿಕವಾಗಿ ಭಾಗವಹಿಸುವರು. ಸಾಹಿತಿಗಳು, ಕಲಾವಿದರು, ಕವಯತ್ರಿಯರು ಹಾಗೂ ಮಹಿಳಾ ಸಾಧಕರಿಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಸಾಪ ಖಜಾಂಚಿ ಲಕ್ಷ್ಮೀಕಾಂತ್ ಗೋಷ್ಠಿಗಳ ಮಾಹಿತಿ ನೀಡಿದರು. ಮಾ.2ರಂದು ಸಂಜೆ 6ರಿಂದ 7ರವರೆಗೆ ಶಿರಸಿಯ ಜ್ಯೋತಿ ಹೆಗಡೆ ಇವರಿಂದ ರುದ್ರವಾಣಿ, 7ರಿಂದ 8ರವರೆಗೆ ಡಾ. ಜಯದೇವಿ ಜಂಗಮ ಶೆಟ್ಟಿ ಅವರಿಂದ ವಚನ, ಮಾ.3ರಂದು ಮಧ್ಯಾಹ್ನ ಮತ್ತು ಸಂಜೆ ಸ್ನೇಹ ಹಂಪಿಹೊಳಿ ಮತ್ತು ಶಾರದಾ ವಟವಾಡಿ ಇವರು ಗೀತಗಾಯನ ಕಾರ್ಯಕ್ರಮ ನಡೆಸಿಕೊಡುವರು ಎಂದು ಹೇಳಿದರು.

Leave a Reply

Your email address will not be published. Required fields are marked *