ಸ್ವಾಭಿಮಾನಿ ಅಜ್ಜನಿಗೆ ಸಮಸ್ಯೆ ಸಾವಿರ!

ವಿಜಯವಾಣಿ ವಿಶೇಷ ಕುಂದಾಪುರ ಕನ್ಯಾನ ಗ್ರಾಮ ಬಾಡಬೆಟ್ಟು ನಿವಾಸಿ ನಿವೃತ್ತ ಶಿಕ್ಷಕ ಅಣ್ಣಪ್ಪ ಶೆಟ್ಟಿ ತಮ್ಮ ಹಕ್ಕಿನ ಭೂಮಿ ಹಾಗೂ ಶಿಕ್ಷಣ ಇಲಾಖೆ ಗೊಂದಲದಿಂದ ಉದ್ಭವಿಸಿದ ಸಂಕಷ್ಟಗಳ ಬಗ್ಗೆ ವಿಜಯವಾಣಿ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ನಮ್ಮ ಹಿರಿಯ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿ ಸಮಗ್ರ ಮಾಹಿತಿ ಕಲೆಹಾಕಿ ಓದುಗರ ಮುಂದಿಟ್ಟಿದ್ದಾರೆ.

ಇದ್ದಿದ್ದು ಇದ್ದ ಹಾಗೇ ಹೇಳಿದರೆ ಏನೆಲ್ಲ ಸಮಸ್ಯೆ ಎದುರಿಸಬೇಕು ಎನ್ನುವುದಕ್ಕೆ ಹಿರಿಯಜ್ಜನ ಜೀವನವೇ ಒಂದು ಕನ್ನಡಿ. ಇಳಿ ವಯಸ್ಸಿನಲ್ಲೂ ನ್ಯಾಯಕ್ಕಾಗಿ ಕಚೇರಿ, ಕೋರ್ಟ್ ಅಲೆಯುವ ಅಜ್ಜನ ಸಾಹಸ ಮೆಚ್ಚಲೇಬೇಕು. ತನ್ನವರಿಂದ ದೂರ ಉಳಿದು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳುತ್ತಿರುವ ಹಿರಿಯಜ್ಜನ ಉತ್ಸಾಹ ತರುಣರನ್ನೂ ನಾಚಿಸುತ್ತದೆ. ಒಂಟಿ ಜೀವನ ನಡೆಸುತ್ತಿರುವ ಅಜ್ಜಿನ ಉಮೇದಿಗೆ ಸೆಲ್ಯೂಟ್ ಹೊಡೆಯಬೇಕು.
ಕುಂದಾಪುರ ತಾಲೂಕು ಕನ್ಯಾನ ಗ್ರಾಮ ಬಾಡಬೆಟ್ಟು ದೊಡ್ಡಬೆತ್ತ ನಿವಾಸಿ ಹಿರಿಯ ನಾಗರಿಕ ನಿವೃತ್ತ ಶಿಕ್ಷಕ ವೈ.ಅಣ್ಣಪ್ಪ ಶೆಟ್ಟಿ (80) ಬದುಕಿನ ಅನಾವರಣ ಇದು.
ಕಳೆದ ಇಪ್ಪತ್ತು ವರ್ಷದಿಂದ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ಸ್ವಾಮಿ ರಾಮದೇವ ಪುಸ್ತಕ ಪ್ರಭಾವದಿಂದ ಅವಿವಾಹಿತರಾಗಿಯೇ ಉಳಿದಿದ್ದಾರೆ. ಸ್ವಂತ ಪರಿಶ್ರಮದಿಂದ ಅಡಕೆ, ತೆಂಗು, ಬಾಳೆ, ಕರಿಮೆಣಸು ಬೆಳೆಸಿದ್ದಾರೆ. ಇಳಿ ವಯಸ್ಸಲ್ಲೂ ತೋಟಕ್ಕೆ ನೀರುಣಿಸುತ್ತಾರೆ.

ಶೆಟ್ಟಿ ಜಾಗಕ್ಕೆ ಕನ್ನ:  ಶಿಕ್ಷಕ ವೃತ್ತಿಯಲ್ಲಿ ಉಳಿಸಿದ್ದ ಹಣದಿಂದ ಸುಮಾರು 1.50 ಲಕ್ಷ ರೂ. ವ್ಯಯಿಸಿ ಒಂದು ಎಕರೆ ಜಾಗ ವಿಕ್ರಯಿಸಿದ್ದು, ತಮ್ಮ ಹೆಸರಲ್ಲಿ ದಾಖಲೆ ಕೂಡ ಮಾಡಿಕೊಂಡಿದ್ದಾರೆ. ಆದರೆ ವಯಸ್ಸಾದ ಒಂಟಿ ಜೀವ ಎನ್ನುವ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ಕನ್ನಹಾಕುವ ಪ್ರಯತ್ನ ನಡೆಯುತ್ತಿದೆ. ಜಾಗ ಕಸಿಯುವ ಪ್ರಯತ್ನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.

ಶಿಕ್ಷಣ ಇಲಾಖೆಯೊಂದಿಗೆ ಗುದ್ದಾಟ:  ಶಿಕ್ಷಕರಾಗಿ ನಿವೃತ್ತಿ ಹೊಂದಿದ ನಂತರವೂ ಶಿಕ್ಷಣ ಇಲಾಖೆ ಗೊಂದಲದಿಂದ ಪಿಂಚಣಿ ಕೂಡ ಕಡಿಮೆ ಬರುತ್ತಿದೆ. ಸುಮಾರು 20 ಸಾವಿರ ರೂ. ಬರಬೇಕಿದ್ದ ಪಿಂಚಣಿ 13 ಸಾವಿರ ರೂ.ಗೆ ಇಳಿದಿದೆ. ಅಣ್ಣಪ್ಪ ಶೆಟ್ಟಿ ಕುಂದಬಾರಂದಾಡಿ ಶಾಲೆಗೆ ವರ್ಗವಾಗಿದ್ದು, ಅದನ್ನು ವಿರೋಧಿಸಿದ್ದರು. ಬೇರೆ ಎಲ್ಲಿಗಾದರೂ ವರ್ಗ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಶಿಕ್ಷಣ ಇಲಾಖೆ ಅವರ ಬೇಡಿಕೆಗೆ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಈ ವಿಷಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಒಂಬತ್ತು ವರ್ಷ ಪೇ ಲಾಸ್‌ನಲ್ಲಿ ಕುಳಿತ ಅಣ್ಣಪ್ಪ ಶೆಟ್ಟಿ ಅವರಿಗೆ ಪೇಲಾಸ್ ತುಂಬಿಕೊಟ್ಟು ಶಿಕ್ಷಕರಾಗಿ ಪುನಃ ನೇಮಕ ಮಾಡುವಂತೆ ನ್ಯಾಯಾಲಯ ಆದೇಶಿಸಿದ ಬಳಿಕ ಶಿಕ್ಷಕರಾಗಿ ಪುನರಾಯ್ಕೆ ಆದರೂ ಪೇಲಾಸ್ ತುಂಬಿಕೊಡಲಿಲ್ಲ. ಪರಿಣಾಮ ಅಣ್ಣಪ್ಪ ಶೆಟ್ಟಿಗೆ ಪಿಂಚಣಿ ಲಾಸ್ ಆಗುತ್ತಿದೆ. ಇದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸಿದ್ದಿದ್ದರೆ ಅಣ್ಣಪ್ಪ ಶೆಟ್ಟಿ ಅವರ ಎಲ್ಲ ಸಮಸ್ಯೆಗೂ ಪರಿಹಾರ ಸಿಗುತ್ತಿತ್ತು. ನಿಷ್ಠುರವಾದ ಅಣ್ಣಪ್ಪ ಶೆಟ್ಟಿ ಜೀವನದಲ್ಲಿ ದೊಡ್ಡ ವಿಲನ್.

ಶಿಕ್ಷಕ ಜೀವನ ನಡೆಸಿ ನಿವೃತ್ತಿ ನಂತರ ಸಂಪಾದಿಸಿದ ಹಣ ವ್ಯಯಿಸಿ ಒಂದು ಎಕರೆ ಜಾಗ ಪಡೆದೆ. ಜಾಗದ ದಾಖಲೆ ಇದ್ದರೂ ಒಂಟಿ ಮುದುಕ ಎನ್ನುವ ನಿಟ್ಟಿನಲ್ಲಿ ಜಾಗವನ್ನೇ ಒತ್ತುವರಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನ್ಯಾಯಾಲಯ 9ವರ್ಷ ಪೇಲಾಸ್ ಕೊಟ್ಟು ಶಿಕ್ಷಕ ವೃತ್ತಿಗೆ ನೇಮಿಸಿಕೊಳ್ಳುವಂತೆ ಆದೇಶ ನೀಡಿದ್ದರಿಂದ ಮತ್ತೆ ತೆಕ್ಕಟ್ಟೆ ಶಾಲೆಗೆ ಮರು ನೇಮಕ ಮಾಡಿ, ಕುಂಭಾಶಿ ಶಾಲೆಯಲ್ಲಿ ವೃತ್ತಿ ಮಾಡುವಂತಾಯಿತು. ಆದರೆ ಶಿಕ್ಷಣ ಇಲಾಖೆ ಪೇಲಾಸ್ ತುಂಬಿಕೊಡಲಿಲ್ಲ. ಹಾಗಾಗಿ ಪಿಂಚಣಿ ತೀರ ಕಡಿಮೆಯಾಗಿದ್ದು, ಕಾನೂನು ಹೋರಾಟ ಮಾಡಬೇಕಾಗಿದೆ. ಇಳಿ ವಯಸ್ಸಲ್ಲಿ ಕೋರ್ಟ್ ಕಚೇರಿ ಅಲೆಯುವುದು ಕಷ್ಟವಾಗುತ್ತಿದೆ.
ವೈ.ಅಣ್ಣಪ್ಪ ಶೆಟ್ಟಿ, ನಿವೃತ್ತ ಶಿಕ್ಷಕ, ಕನ್ಯಾನ, ಬಾಡಬೆಟ್ಟು