ಕುಂದಗೋಳದಲ್ಲಿ ನರಸತ್ತ ರಾಜಕೀಯ: ಹದ್ದು ಮೀರಿದ ನಾಯಕರ ವಾಕ್​ಸಮರ

ಹುಬ್ಬಳ್ಳಿ: ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯಾಗಿರುವ ಕುಂದಗೋಳ ಉಪಚುನಾವಣೆಯಲ್ಲಿ ಮಾತಿನ ಸಮರ ಹದ್ದುಮೀರಿದ್ದು, ಬುಧವಾರ ‘ನರಸತ್ತ’ ಮಾತು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ಕಾಂಗ್ರೆಸ್​ನ ನಾಯಕರೆಲ್ಲ ನರಸತ್ತವರು. ಸಿದ್ದರಾಮಯ್ಯ ಸಿಎಂ ಆಗುವ ವಿಚಾರಕ್ಕೆ ಚೇಲಾಗಳು ಸೋ… ಎಂದು ಸೋಬಾನ ಹಾಡುತ್ತಿದ್ದಾರೆ. ಸ್ವಾಭಿಮಾನಿ ಮಲ್ಲಿಕಾರ್ಜುನ ಖರ್ಗೆಯವರೂ ಏಕೆ ಬಾಯಿ ಮುಚ್ಚಿಕೊಂಡಿದ್ದಾರೆ ಗೊತ್ತಿಲ್ಲ ಎಂದು ಕುಟುಕಿದರು.

ಈಶ್ವರಪ್ಪ ಮಿದುಳು ಮತ್ತು ನಾಲಿಗೆಗೆ ಲಿಂಕ್ ತಪ್ಪಿದೆ. ಇಂಥವರ ಬಗ್ಗೆ ನನಗೆ ಪ್ರಶ್ನೆ ಕೇಳಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಈ ವಿಷಯ ತಿಳಿದ ಈಶ್ವರಪ್ಪ, ಮೊದಲು ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳಲಿ. ತಾವೇ ಸಿಎಂ ಎಂದು ಹೇಳಿಸಿಕೊಳ್ಳುತ್ತಿದ್ದರೂ ಕಾಂಗ್ರೆಸ್​ನಲ್ಲಿ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ನರ ಸತ್ತವರು ಎಂದು ದೇಸಿ ಭಾಷೆಯಲ್ಲಿ ಮಾತನಾಡಿದ್ದೇನೆ. ತಾಕತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲೆಸೆದರು.

ಕಡ್ಲೆಕಾಯಿ ಗಿಡ ಅಲ್ಲ

ಕಾಂಗ್ರೆಸ್​ನವರಿಗೆ ನರ ಇದೆಯೋ ಸತ್ತಿದೆಯೋ ಎಂದು ಪರೀಕ್ಷೆ ಮಾಡುವ ಶಕ್ತಿ ಈಶ್ವರಪ್ಪ ಅವರಿಗಿದ್ದರೆ ನಮ್ಮ ಜನ ತೋರಿಸ್ತಾರೆ. ನರ, ಗಂಡಸ್ತನದ ಬಗ್ಗೆ ಪರೀಕ್ಷೆ ಕೊಟ್ಟು ನೋಡಲಿ. ದೋಸ್ತಿ ಸರ್ಕಾರ ಕಿತ್ತುಹೋಗಲು ಅದು ಕಡ್ಲೆಕಾಯಿ ಗಿಡ ಅಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ ತಿರುಗೇಟು ನೀಡಿದರು. ಅಧಿಕಾರ ಇಲ್ಲದೆ ಬಿಜೆಪಿಯವರಿಗೆ ಇರಲು ಆಗುತ್ತಿಲ್ಲ. ಮೈತ್ರಿ ಬೇಡ, ಚುನಾವಣೆಗೇ ಹೋಗೋಣ ಎಂದು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆಯಂತೆ. ನಾವೇನು ಕೈಕಟ್ಟಿ ಕುಳಿತಿದ್ದೇವಾ ಎಂದು ಖಾರವಾಗಿ ಪ್ರಶ್ನಿಸಿದರು.

ನೆಲ ಒರೆಸಲೂ ಸಲ್ಲ

ಜಮೀರ್ ಅಹ್ಮದ್ ಖಾನ್ ಚಮಚಾಗಿರಿ ಮನುಷ್ಯ. ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ವಾಚಮನ್ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ. ಆತ ನೆಲ ಒರೆಸಲೂ ಲಾಯಕ್ಕಲ್ಲ, ಅಂತಹ ಕಳ್ಳನನ್ನು ಸಮೀಪಕ್ಕೂ ಬಿಟ್ಟುಕೊಳ್ಳಬೇಡಿ ಎಂದು ಯಡಿಯೂರಪ್ಪನವರಿಗೆ ಹೇಳಿದ್ದೇನೆ ಎಂದು ಈಶ್ವರಪ್ಪ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್, ಕೊಚ್ಚೆ ಮೇಲೆ ಕಲ್ಲು ಎಸೆದರೆ ನಮಗೇ ಸಿಡಿಯುತ್ತದೆ. ಈಶ್ವರಪ್ಪ ಮಾತಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ಮೋದಿ ಘೋಷಣೆಗೆ ಸಿದ್ದು ಸಿಡಿಮಿಡಿ

ದೇವನೂರಿನಲ್ಲಿ ಸಿದ್ದರಾಮಯ್ಯ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ..ಮೋದಿ.. ಘೋಷಣೆ ಕೂಗಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ವಣಗೊಂಡಿದೆ. ಘೋಷಣೆಯಿಂದ ಇರಿಸುಮುರಿಸುಗೊಂಡ ಸಿದ್ದರಾಮಯ್ಯ, ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ದೂರ ಮಾಡುವಂತೆ ಪೊಲೀಸರಿಗೆ ಸೂಚಿಸಿದರು. ಅದೇ ಸಂದರ್ಭದಲ್ಲಿ ಮಧ್ಯೆಪ್ರವೇಶಿಸಿದ ಕಾಂಗ್ರೆಸ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದರು. ಪೊಲೀಸರು ಹರಸಾಹಸ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಮುಂಜಾಗ್ರತಾ ಕ್ರಮವಾಗಿ ಬಿಜೆಪಿ ಮುಖಂಡ ಈಶ್ವರಪ್ಪ ಅವರ ಪ್ರಚಾರ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದರು.