ಉಪಸಮರಕ್ಕೆ ಬಿಜೆಪಿ-ಕಾಂಗ್ರೆಸ್ ಸಜ್ಜು: ನಾಳೆಯಿಂದ ಎರಡೂ ಕ್ಷೇತ್ರಗಳಲ್ಲಿ ಬಿಎಸ್​ವೈ ಪ್ರವಾಸ ರಂಗೇರಲಿದೆ ಕಣ

ಬೆಂಗಳೂರು: ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯಲ್ಲಿ ಗೆಲುವು ಮೈತ್ರಿ ಸರ್ಕಾರದಷ್ಟೇ ಪ್ರತಿಪಕ್ಷಕ್ಕೂ ಮುಖ್ಯವಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ 7 ದಿನ ಎರಡೂ ಕ್ಷೇತ್ರಗಳಲ್ಲಿ ಸಂಚರಿಸಿ ಪ್ರಚಾರ ನಡೆಸಲಿದ್ದಾರೆ.

ಬುಧವಾರ ಮಧ್ಯಾಹ್ನ ವೇಳೆಗೆ ಶಿವಮೊಗ್ಗಕ್ಕೆ ಪ್ರಯಾಣಿಸಿರುವ ಬಿಎಸ್​ವೈ, ಮೇ 9ರ ರಾತ್ರಿ ಹೊರಟು ಬಹಿರಂಗ ಪ್ರಚಾರ ಅಂತ್ಯವಾಗುವ ಮೇ 17ರವರೆಗೆ ಎರಡೂ ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾರೆ. ಮೇ 10-12ರವರೆಗೆ ಕುಂದಗೋಳ, 13-14ಕ್ಕೆ ಚಿಂಚೋಳಿಯಲ್ಲಿ, 16-17ಕ್ಕೆ ಮತ್ತೆ ಕುಂದಗೋಳದಲ್ಲಿ ತೊಡಗಿಸಿಕೊಂಡು ಸಭೆ-ಸಮಾವೇಶಗಳ ಜತೆಗೆ ಚುನಾವಣೆ ತಂತ್ರಗಾರಿಗೆ ಹೆಣೆಯಲಿದ್ದಾರೆ.

ಬರದ ಚಿತ್ರಣ ನೀಡುವಂತೆ ಪತ್ರ: ರಾಜ್ಯದಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿನ ವಾಸ್ತವಿಕ ಚಿತ್ರಣದ ವರದಿ ನೀಡುವಂತೆ ಬಿಜೆಪಿ ಶಾಸಕರಿಗೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ಬರ ನಿರ್ವಹಣೆ ವಿಷಯದಲ್ಲಿ ಸರ್ಕಾರ ಸಂಪೂರ್ಣ ವಿಫಲ ವಾಗಿದೆ. ಸಿಎಂ ಕುಮಾರಸ್ವಾಮಿ ಸಂಸದರು ಮತ್ತು ಪ್ರತಿಪಕ್ಷ ನಾಯಕರ ಸಭೆ ಕರೆದು ರ್ಚಚಿಸಬಹುದಿತ್ತು. ಆದರೆ ಅವರು ಸ್ಪಂದಿಸುತ್ತಿಲ್ಲ. ರಾಜ್ಯದ ಬರ ಪರಿಸ್ಥಿತಿ ಬಗ್ಗೆ 2 ದಿನಗಳಲ್ಲಿ ವರದಿ ನೀಡುವಂತೆ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದೇನೆ. ಮೇ 20ರಂದು ಎಲ್ಲ ಶಾಸಕರು-ಸಂಸದರ ಸಭೆ ಕರೆದು ಮುಂದಿನ ಕಾರ್ಯತಂತ್ರದ ಬಗ್ಗೆ ರ್ಚಚಿಸುತ್ತೇವೆ ಎಂದು ಡಾಲರ್ಸ್ ಕಾಲನಿ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಚಾರಕ್ಕೆ ಮುಖ್ಯಮಂತ್ರಿಗೆ ಆಹ್ವಾನ

ಬೆಂಗಳೂರು: ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಚಾರಕ್ಕೆ ಬರುವಂತೆ ಕಾಂಗ್ರೆಸ್ ಆಹ್ವಾನಿಸಿದೆ. ಈ ಕುರಿತು ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೇವೆ ಎಂದರು. ಸಿದ್ದರಾಮಯ್ಯ ಮತ್ತೇ ಸಿಎಂ ಹೇಳಿಕೆ ವಿಚಾರ ಈಗ ಅಪ್ರಸ್ತುತ. ಐದು ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಇಂತಹ ಹೇಳಿಕೆ ನೀಡಿರುವ ಮಂತ್ರಿಗಳ ಜತೆ ಮಾತನಾಡಿ, ಇಂತಹ ಹೇಳಿಕೆ ಏಕೆ ನೀಡಿದ್ದೀರಿ ಎಂದು ಕೇಳುವುದಾಗಿ ತಿಳಿಸಿದರು.

ನನ್ನ ವಿರುದ್ಧ ಸಿಎಂ ಕುಮಾರಸ್ವಾಮಿ ಬೇಹುಗಾರಿಕೆ ಮಾಡುತ್ತಿದ್ದಾರಂತೆ, ಮಾಡಿದರೆ ಮಾಡಿಕೊಳ್ಳಲಿ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

| ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಅಧಿಕಾರ ದುರುಪಯೋಗ ಬಿಜೆಪಿ ಕೆಲಸ

ಸರ್ಕಾರದ ಸಂಸ್ಥೆಗಳನ್ನು ಯಾರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬೇಹುಗಾರಿಕೆ, ಟೆಲಿಫೋನ್ ಟ್ಯಾಪಿಂಗ್, ಸರ್ಕಾರಿ ಯಂತ್ರಗಳ ದುರುಪಯೋಗ ಇವನ್ನೆಲ್ಲ ಮಾಡುವುದು ಬಿಜೆಪಿ. ಎಲ್ಲ ಮೋಸ, ವಂಚನೆ ಮಾಡುವವರೂ ಅವರೆ. ಯಡಿಯೂರಪ್ಪ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ಮಾತುಗಳಿಗೆ ಬೆಲೆ ಕೊಡಬಾರದೆಂದು ದಿನೇಶ್ ಗುಂಡೂರಾವ್ ಹೇಳಿದರು.

Leave a Reply

Your email address will not be published. Required fields are marked *