ಉಪಸಮರ ಗೆಲ್ಲಲು ಕೈ ತಂತ್ರ: ಬಿಜೆಪಿ ಮಣಿಸಲು ಕೊನೇ ದಾಳ

ಬೆಂಗಳೂರು: ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂದು ಹಠತೊಟ್ಟಿರುವ ಕಾಂಗ್ರೆಸ್, ಪ್ರಚಾರದ ಕೊನೇ ಹಂತದಲ್ಲಿ ಹೊಸ ಹೊಸ ದಾಳಗಳನ್ನು ಉರುಳಿಸುತ್ತಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಗುರುವಾರ ಕಾಂಗ್ರೆಸ್ ಸಚಿವರ ಸಭೆ ನಡೆದಿದ್ದು, ಕ್ಷೇತ್ರಗಳ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಎರಡೂ ಕಡೆ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಇರುವ ತೊಡಕುಗಳು ಮತ್ತು ಅವನ್ನು ಸರಿಪಡಿಸಿಕೊಳ್ಳುವ ಬಗ್ಗೆ ವಿಚಾರ ವಿನಿಮಯ ನಡೆಯಿತೆನ್ನಲಾಗಿದೆ.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಉಪಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರ ಜತೆ ಪೂರ್ವಭಾವಿ ಚರ್ಚೆ ಮಾಡಿದ್ದೇವೆ. ಬುಧವಾರ ಸಿಎಂ, ಡಿಸಿಎಂ ಜತೆ ಕೂಡ ಚರ್ಚೆ ಮಾಡಿದ್ದೇವೆ. ಚುನಾವಣೆ ಎದುರಿಸುವ ಬಗ್ಗೆ ಮಾತುಕತೆ ನಡೆದಿದೆ. ಯಾರ್ಯಾರಿಗೆ ಜವಾಬ್ದಾರಿ ನೀಡಿದ್ದೆವೋ ಅವರೆಲ್ಲ ಶುಕ್ರವಾರ ಕ್ಷೇತ್ರಗಳಿಗೆ ತೆರಳಲಿದ್ದಾರೆ ಎಂದರು.

ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕುಂದಗೋಳ ದಲ್ಲಿ ದಿನೇಶ್ ಗುಂಡೂರಾವ್ ಮತ್ತು ಸತೀಶ್ ಜಾರಕಿಹೊಳಿ, ಚಿಂಚೋಳಿಯಲ್ಲಿ ಖರ್ಗೆ ನೇತೃತ್ವವಿದೆ. ನಾನು,

ಡಿಸಿಎಂ, ಖಂಡ್ರೆ, ಪ್ರಿಯಾಂಕ್ ಎಲ್ಲರೂ ಪ್ರಚಾರ ನಡೆಸಿದ್ದೇವೆ. ಗುಂಡ್ಲುಪೇಟೆ-ನಂಜನಗೂಡು ಬೈ ಎಲೆಕ್ಷನ್ ಮಾಡಿದ್ದೆವು, ಭಾರಿ ಅಂತರದಲ್ಲಿ ಗೆದ್ದಿದ್ದೆವು. ಅದನ್ನೇ ಗಮನದಲ್ಲಿಟ್ಟುಕೊಂಡು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

13ಕ್ಕೆ ಸಿಎಂ ಕುಮಾರಸ್ವಾಮಿ ಪ್ರಚಾರ

ಕುಂದಗೋಳ, ಚಿಂಚೋಳಿ ಕ್ಷೇತ್ರಗಳ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿಎಂ ಕುಮಾರಸ್ವಾಮಿ ಮೇ 13 ಮತ್ತು 14ರಂದು ಪ್ರಚಾರ ನಡೆಸಲಿದ್ದಾರೆ. ಮೇ 11

ರಂದು ಕೊಡಗು ಪ್ರವಾಹ ಪೀಡಿತರ ಪುನರ್ವಸತಿ ಯೋಜನೆಯ ಪ್ರಗತಿ ಪರಿಶೀಲನೆ ವೀಕ್ಷಿಸುವರು. ಮೇ 13 ರಂದು ಕುಂದಗೋಳಕ್ಕೆ, ಮೇ 14ರಂದು ಚಿಂಚೋಳಿಗೆ ತೆರಳುವರು ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

ಮಹೇಶ್ ಕುಮಠಳ್ಳಿ ಮುಂದಿಟ್ಟು ಪ್ರಚಾರ

ಕುಂದಗೋಳ, ಚಿಂಚೋಳಿ ಗೆದ್ದರೆ ರಾಜ್ಯದಲ್ಲಿ ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದ್ದು, ಮತಗಳ ಕ್ರೋಡೀಕರಣಕ್ಕೆ ಇದೇ ಅಸ್ತ್ರ ಬಳಸುತ್ತಿದೆ. ಈ ಪ್ರಯತ್ನಕ್ಕೆ ಪ್ರತಿಯಾಗಿ ಕಾಂಗ್ರೆಸ್ ಶಾಸಕ ಮಹೇಶ್ ಕುಮಠಳ್ಳಿ ಅವರನ್ನು ಪ್ರಚಾರಕ್ಕೆ ಕರೆದೊಯ್ಯುತ್ತಿದೆ. ಆ ಮೂಲಕವಾಗಿ ರಮೇಶ್ ಜಾರಕಿಹೊಳಿ ಜತೆ ಯಾರೂ ಇಲ್ಲ ಎಂದು ಬಿಂಬಿಸುವುದು ಕಾಂಗ್ರೆಸ್​ನ ಉದ್ದೇಶ. ಸರ್ಕಾರಕ್ಕೆ ಅಪಾಯವಿಲ್ಲ, ಯಾರೂ ಬಿಜೆಪಿ ಸೇರುತ್ತಿಲ್ಲ, ಬಿಎಸ್​ವೈ ಮತ್ತೆ ಸಿಎಂ ಆಗುವುದಿಲ್ಲ ಎಂದು ಪ್ರಚಾರ ಸಭೆಗಳಲ್ಲಿ ಹೆಚ್ಚೆಚ್ಚು ಪ್ರಸ್ತಾಪಿಸುವ ಮೂಲಕ ಬಿಜೆಪಿಯತ್ತ ಸಾರಾಸಗಟು ಮತ ವರ್ಗಾವಣೆ ತಡೆಯಲು ಕಾಂಗ್ರೆಸ್ ತೀರ್ವನಿಸಿದೆ.

ಸಿ.ಎಸ್. ಶಿವಳ್ಳಿ ನೆನೆದು ಡಿಕೆಶಿ ಕಣ್ಣೀರು

ಕುಂದಗೋಳ: ನನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ್ದೇನೆ. ಆದರೆ, ಎಂದೂ ಕಣ್ಣೀರು ಬಂದಿಲ್ಲ. ಆದರೆ ಆತ್ಮೀಯ ಸ್ನೇಹಿತ ಸಿ.ಎಸ್.ಶಿವಳ್ಳಿ ಅಗಲಿಕೆಯ ನೋವು ಇನ್ನೂ ಹೋಗಿಲ್ಲ ಎನ್ನುತ್ತಲೇ ಸಚಿವ ಡಿ.ಕೆ.ಶಿವಕá-ಮಾರ್ ಇಂಗಳಗಿ ಗ್ರಾಮದಲ್ಲಿ ಕಣ್ಣೀರಿಟ್ಟರು.

ಕುಸುಮಾವತಿ ಶಿವಳ್ಳಿ ಪರ ಮತಯಾಚನೆ ಮಾಡಿ ಮಾತನಾಡಿದ ಡಿಕೆಶಿ, ನಾನು ನಾಟಕ ಮಾಡುತ್ತಿಲ್ಲ. ನಿಜವಾಗಿಯೂ ಕಣ್ಣೀರು ಬರುತ್ತಿದೆ. ಶಿವಳ್ಳಿ ಅವರನ್ನು ಕಳೆದುಕೊಂಡಿದ್ದು ಮರೆಯಲಾಗದ ನೋವು. ಅವರ ಆತ್ಮಕ್ಕೆ ಶಾಂತಿ ಕೋರಲು ಅವರ ಪತ್ನಿಯನ್ನು ಎಲ್ಲರೂ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಕುಂದಗೋಳ ಉಪಚುನಾವಣೆಯಲ್ಲಿ ಕಾರ್ಯಕರ್ತರ ಕೊರತೆ ಎದುರಾಗಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿ ಕಾರ್ಯಕರ್ತರಿಗೆ ಕರೆ ಮಾಡಿ ಕಾಂಗ್ರೆಸ್​ಗೆ ಆಹ್ವಾನಿಸುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ರಾಜಕೀಯ ನಿವೃತ್ತಿ ಘೋಷಿಸಿದ್ದ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಾಗಿ ಹೇಳುತ್ತಿದ್ದು, ಅವರೊಬ್ಬ ಸುಳ್ಳುಗಾರರಾಗಿದ್ದಾರೆ.

| ಜಗದೀಶ ಶೆಟ್ಟರ್ ಮಾಜಿ ಸಿಎಂ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಮದುವೆ ಆಗೋದೂ ಒಂದೇ, ಸಿದ್ದರಾಮಯ್ಯ ಮತ್ತೆ ಸಿಎಂ ಆಗೋದೂ ಒಂದೇ.

| ಕೆ.ಎಸ್. ಈಶ್ವರಪ್ಪ ಮಾಜಿ ಉಪಮುಖ್ಯಮಂತ್ರಿ

ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ದೂರು

ಧಾರವಾಡ: ಮಾಜಿ ಸಚಿವ ಸಿ.ಎಸ್.ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ ಎಂಬ ಶಾಸಕ ಬಿ.ಶ್ರೀರಾಮುಲು ಹೇಳಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಅವರಿಗೆ ಗುರುವಾರ ದೂರು ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕೈ ಮುಖಂಡರು, ಶ್ರೀರಾಮುಲು ಹೇಳಿಕೆ ಯಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಜನತಾ ಪ್ರತಿನಿಧಿ ಕಾಯ್ದೆ 1951ರ ಅಡಿ ಶ್ರೀರಾಮುಲು ಹಾಗೂ ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ

ಬಳ್ಳಾರಿ: ದಿವಂಗತ ಸಿ.ಎಸ್.ಶಿವಳ್ಳಿ ಕುರಿತ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಶಾಸಕ ಬಿ.ಶ್ರೀರಾಮುಲು ಕಳವಳ ವ್ಯಕ್ತಪಡಿಸಿದರು. ಶಿವಳ್ಳಿ ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದರು. ಅವರ ಖಾತೆಯಲ್ಲಿ ಸಿಎಂ ಹಾಗೂ ಇತರರು ಹಸ್ತಕ್ಷೇಪ ಮಾಡಿದ್ದರು. ಆ ಕಾರಣಕ್ಕೆ ಶಿವಳ್ಳಿ ನೊಂದಿದ್ದರು ಎಂದು ಹೇಳಿದ್ದೆ. ನಾನು ವಿಚಾರ ಮಾಡಿಯೇ ಮಾತನಾಡಿದ್ದೇನೆ, ಬೇರೆ ಯಾವ ಉದ್ದೇಶವೂ ಇರಲಿಲ್ಲ. ಆದರೆ, ನನ್ನ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಠೋಡ್ ವಿರುದ್ಧ ಡಾ.ಜಾದವ್ ಆಕ್ರೋಶ

ಚಿಂಚೋಳಿ: ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ.. ಹೀಗೆ ನಾಲ್ಕೈದು ಸಲ ಪಕ್ಷ ಬದಲಾಯಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ್​ರೇ ನೀತಿಗೆಟ್ಟವರು ಹೊರತು, ನಾನಲ್ಲ ಎಂದು ಮಾಜಿ ಶಾಸಕ ಡಾ.ಉಮೇಶ ಜಾಧವ್ ಗುಡುಗಿದ್ದಾರೆ. ಪಕ್ಷ ಬದಲಿಸುವುದನ್ನೇ ಚಾಳಿ ಮಾಡಿಕೊಂಡಿರುವ ರಾಠೋಡ್ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹೋರಾಟ ಮಾಡುತ್ತ ಬಂದಿದ್ದರು. ಆದರೀಗ ಅದೇ ಖರ್ಗೆ ಕಾಲಿಗೆ ಬಿದ್ದು ಟಿಕೆಟ್ ಪಡೆದಿದ್ದಾರೆ. ಇದು ಅವರದು ಎಂಥ ಮನಸ್ಥಿತಿ ಎಂಬುದು ತೋರಿಸಿಕೊಡುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದೇನೆ. ರಾಠೋಡ್ ಈ ಚುನಾವಣೆಯಲ್ಲಿ ಸೋತ ಬಳಿಕ ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದರು.

ಸಿಎಂ ಭೇಟಿಯಾದ ನಾಗೇಂದ್ರ

ಬೆಂಗಳೂರು: ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುತ್ತ, ಸರ್ಕಾರ ಅಭದ್ರವಾಗಿದೆ ಎಂಬ ವಾತಾವರಣವನ್ನು ಸರಿಪಡಿಸುವ ಸಲುವಾಗಿ ಅತೃಪ್ತರನ್ನು ಕರೆದು ಮಾತನಾಡುವ ಕಾರ್ಯಕ್ಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಗುರುವಾರ ಸಚಿವ ಸಂಪುಟ ಸಭೆಗೂ ಮುನ್ನ ಬಳ್ಳಾರಿ ಶಾಸಕ ಬಿ. ನಾಗೇಂದ್ರ ಜತೆಗೆ 10 ನಿಮಿಷಕ್ಕೂ ಹೆಚ್ಚು ಸಮಯ ಸಿಎಂ ಚರ್ಚೆ ನಡೆಸಿದ್ದಾರೆ. ಸಿಎಂ ಆಪ್ತ ಎನ್.ಪಿ. ಬಿರಾದಾರ್ ಜತೆಗೆ ನಾಗೇಂದ್ರ ಆಗಮಿಸಿದ್ದರು. ರಮೇಶ್ ಜಾರಕಿಹೊಳಿ ಜತೆಗಿದ್ದಾರೆ ಎನ್ನಲಾಗುವ ಶಾಸಕರನ್ನು ಕರೆತರುವ, ಮಾತುಕತೆ ನಡೆಸುವ ಕಾರ್ಯವನ್ನು ಬಿರಾದಾರ್ ಅವರಿಗೆ ಸಿಎಂ ನೀಡಿದ್ದಾರೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಶಾಸಕರ ಜತೆಗೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *