ಮತಗಟ್ಟೆಯತ್ತ ಕುಂದಗೋಳ ಮತದಾರರು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಲಿದೆಯೆಂದು ಬಿಂಬಿಸಲಾಗಿರುವ ಕುಂದಗೋಳ ಉಪ ಚುನಾವಣೆಗೆ ಭಾನುವಾರ (ಮೆ 19) ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕಾಂಗ್ರೆಸ್ಸಿನ ಕುಸುಮಾ ಶಿವಳ್ಳಿ ಹಾಗೂ ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ನಡುವೆ ನೇರ ಹಣಾಹಣಿ ಇದೆ. ಇವರಿಬ್ಬರು ಸೇರಿ ಕಣದಲ್ಲಿ 8 ಜನ ಅಭ್ಯರ್ಥಿಗಳಿದ್ದಾರೆ. ಇವರಲ್ಲಿ ಮೂವರು ಸ್ಪರ್ಧಾ ಕಣದಿಂದ ನಿವೃತ್ತಿ ಘೊಷಿಸಿದ್ದಾರೆ.

ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಆಕಸ್ಮಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಈ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ದಿ. ಶಿವಳ್ಳಿ ಅವರ ಪತ್ನಿಯನ್ನೇ ಕಣಕ್ಕಿಳಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋಲು ಕಂಡಿದ್ದ ಚಿಕ್ಕನಗೌಡ್ರ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ಕಳೆದ ತಿಂಗಳು ನಡೆದ ಧಾರವಾಡ ಲೋಕಸಭಾ ಚುನಾವಣೆಗಿಂತ ಕುಂದಗೋಳ ಉಪ ಕದನ ರಂಗೇರಿತ್ತು. ಕಳೆದ 10 ದಿನ ಇಡೀ ಸರ್ಕಾರವೇ ಇಲ್ಲಿ ಠಿಕಾಣಿ ಹೂಡಿತ್ತು. ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ಬಿಂಬಿಸಿದೆ. ಈ ಕಾರಣಕ್ಕೆ ಉಪ ಚುನಾವಣೆ ಮಹತ್ವ ಪಡೆದಿದ್ದು, ಮತದಾರರಲ್ಲಿ ಕುತೂಹಲ ಹೆಚ್ಚಿಸಿದೆ. ಭಾನುವಾರ ಮತ ಚಲಾಯಿಸುವ ಮೂಲಕ ಮತದಾರರು ತಮ್ಮ ನಿರ್ಣಯ ದಾಖಲಿಸಲಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

ಎಡಗೈ ಮಧ್ಯದ ಬೆರಳಿಗೆ ಶಾಯಿ: ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಶಾಯಿ ಗುರುತು ಹಾಕಲಾಗಿತ್ತು. ಕೆಲವರಲ್ಲಿ ಆ ಗುರುತು ಇನ್ನೂ ಅಳಿಸಿ ಹೋಗಿಲ್ಲ. ಭಾನುವಾರ ಕುಂದಗೋಳ ಉಪ ಚುನಾವಣೆಯಲ್ಲಿ ಮತ ಚಲಾವಣೆ ವೇಳೆ ಗೊಂದಲವಾಗದಂತೆ ಮತದಾರರ ಎಡಗೈ ಮಧ್ಯದ ಬೆರಳಿಗೆ ಶಾಯಿ ಗುರುತು ಹಾಕಲು ಚುನಾವಣಾ ಆಯೋಗ ಸೂಚಿಸಿದೆ.

ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಆಯೋಗ ಸೂಚಿಸಿರುವ 11 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು.

ಮತದಾನದ ವೇಳೆ ಮತಗಟ್ಟೆ ಒಳಗಡೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಮತಗಟ್ಟೆಯ 100 ಮೀ. ವ್ಯಾಪ್ತಿಯಲ್ಲಿ ಮತಗಟ್ಟೆಯ ಅಧ್ಯಕ್ಷಾಧಿಕಾರಿ, ಪಿಆರ್​ಒ ಅವರನ್ನು ಹೊರತುಪಡಿಸಿ ಉಳಿದವರಿಗೆ ಮೊಬೈಲ್ ಫೋನ್, ಟ್ಯಾಬ್ಲೆಟ್, ಕಾರ್ಡ್​ಲೆಸ್ ಫೋನ್ ಬಳಕೆಗೆ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

2 ಸಖಿ, 1 ವಿಕಲಾಂಗರ ಮತಗಟ್ಟೆ ಸ್ಥಾಪನೆ:ಕುಂದಗೋಳ ಪುರದ ಸರ್ಕಾರಿ ಹಿ.ಪ್ರಾ. ಶಾಲೆ ಮತಗಟ್ಟೆ ಸಂಖ್ಯೆ 35, ತಾಪಂ ಮತಗಟ್ಟೆ ಸಂಖ್ಯೆ 37ರಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುವ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ಅಂಬೇಡ್ಕರ್​ನಗರ ಸ.ಹಿ.ಪ್ರಾ. ಶಾಲೆ ಮತಗಟ್ಟೆ ಸಂಖ್ಯೆ 45ರಲ್ಲಿ ವಿಕಲಾಂಗ ಅಧಿಕಾರಿ, ಸಿಬ್ಬಂದಿಯಿಂದ ನಿರ್ವಹಿಸಲ್ಪಡುವ ವಿಕಲಾಂಗರ ಮತಗಟ್ಟೆ ಸ್ಥಾಪಿಸಲಾಗಿದೆ. ಎಲ್ಲ

214 ಮತಗಟ್ಟೆಗಳಿಗೆ ನೀರು, ವಿದ್ಯುತ್, ನೆರಳು, ಹಿರಿಯ ನಾಗರಿಕರು, ವಿಕಲಾಂಗರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಪಂ ಸಿಇಒ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ.