ಉಪ ಕದನಕ್ಕಿಂದು ಮತದಾನ: ಚಿಂಚೋಳಿ, ಕುಂದಗೋಳ ಸಜ್ಜು, ಬಿಎಸ್​ವೈ, ಡಿಕೆಶಿ ಹುಬ್ಬಳ್ಳಿಯಲ್ಲಿ ಠಿಕಾಣಿ

ಹುಬ್ಬಳ್ಳಿ/ಕಲಬುರಗಿ: ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿಗೆ ಕಾರಣ ಎನ್ನಲಾದ ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆಗೆ ಭಾನುವಾರ ಮತದಾನ ನಡೆಯಲಿದೆ. ಎರಡೂ ಕಡೆ ಸಿದ್ಧತೆ ಪೂರ್ಣಗೊಂಡಿದ್ದು, ಆಡಳಿತ ಹಾಗೂ ಪ್ರತಿಪಕ್ಷದ ಭವಿಷ್ಯ ಮತದಾರನ ಕೈಯಲ್ಲಿದೆ.

ಕುಂದಗೋಳದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕುಸಮಾವತಿ ಶಿವಳ್ಳಿ ಹಾಗೂ ಬಿಜೆಪಿಯಿಂದ ಎಸ್.ಐ. ಚಿಕ್ಕನಗೌಡ್ರ ಸ್ಪರ್ಧಿಸುತ್ತಿದ್ದು, ನೇರಾಹಣಾಹಣಿ ಏರ್ಪಟ್ಟಿದೆ. ಇವರ ಜತೆ ಕಣದಲ್ಲಿ 8 ಜನ ಅಭ್ಯರ್ಥಿಗಳಿದ್ದಾರೆ. ಇವರಲ್ಲಿ ಮೂವರು ಸ್ಪರ್ಧಾ ಕಣದಿಂದ ನಿವೃತ್ತಿ ಘೊಷಿಸಿದ್ದಾರೆ. ಅಭ್ಯರ್ಥಿಗಳು ಮನೆ ಪ್ರಚಾರಕ್ಕೆ ಸೀಮಿತಗೊಂಡರು.

214 ಮತಗಟ್ಟೆಗಳು: ಕ್ಷೇತ್ರದಲ್ಲಿ 214 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 97527 ಪುರುಷರು, 91910 ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ನಾಲ್ವರು ಸೇರಿ ಒಟ್ಟು 1,89,441 ಮತದಾರರಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

ನಾಯಕರ ಠಿಕಾಣಿ: ಚುನಾವಣೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್​ನಿಂದ ಸಚಿವ ಡಿ.ಕೆ. ಶಿವಕುಮಾರ ಸೇರಿ ಕೆಲ ಮುಖಂಡರು ಹುಬ್ಬಳ್ಳಿಯಲ್ಲೇ ಠಿಕಾಣಿ ಹೂಡಿದ್ದಾರೆ. ಶುಕ್ರವಾರ ಸಂಜೆ 6ಕ್ಕೆ ಬಹಿರಂಗ ಪ್ರಚಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಹೊರಗಿನ ಮುಖಂಡರಿಗೆ ಕ್ಷೇತ್ರ ಪ್ರವೇಶಕ್ಕೆ ಅವಕಾಶವಿಲ್ಲ. ಹೀಗಾಗಿ ಹುಬ್ಬಳ್ಳಿಯಲ್ಲೇ ಕುಳಿತು ಫೋನ್ ಮೂಲಕ ಸ್ಥಳೀಯ ಮುಖಂಡರನ್ನು ಸಂರ್ಪಸಿ ವಿದ್ಯಮಾನಗಳ ಮಾಹಿತಿ ಪಡೆದು ಸಲಹೆ ಸೂಚನೆ ನೀಡುತ್ತಿದ್ದಾರೆ. ಅಭ್ಯರ್ಥಿಗಳು ಹಾಗೂ ಬೆಂಬಲಿಗರು, ಕಾರ್ಯಕರ್ತರು ಶನಿವಾರ ಸಂಜೆವರೆಗೂ ಮನೆ ಮನೆಗೆ ತೆರಳಿ ಮತ ಯಾಚಿಸಿದರು.

ಅಭ್ಯರ್ಥಿಗಳ ಮನೆ ಮನೆ ಪ್ರಚಾರ

ಚಿಂಚೋಳಿಯಲ್ಲಿ ಬಿಜೆಪಿಯಿಂದ ಡಾ. ಅವಿನಾಶ ಜಾಧವ್ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸುಭಾಷ ರಾಠೋಡ್ ಅದೃಷ್ಟ ಪರೀಕ್ಷೆ ನಡೆಯಲಿದೆ. ಇವರ ಜತೆ ನೋಟಾ ಸೇರಿ 18 ಜನ ಕಣದಲ್ಲಿ ಇದ್ದುದರಿಂದ ಪ್ರತಿ ಬೂತ್​ಗೆ ಎರಡು ಇವಿಎಂ ನೀಡಲಾಗುತ್ತಿದೆ. 99,047 ಪುರುಷ, 94,814 ಮಹಿಳೆಯರು ಹಾಗೂ 16 ಇತರೆ ಸೇರಿ 1,93,877 ಮತದಾರರಿದ್ದು, ಯಾವುದೇ ತೆರನಾದ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 241 ಮತಗಟ್ಟೆಗಳಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಕೇಂದ್ರಗಳಲ್ಲಿ ಹೆಚ್ಚುವರಿ ಪೊಲೀಸ್ ಬಲ ನಿಯೋಜಿಸಲಾಗಿದೆ. ಶುಕ್ರವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಲೇ ಕ್ಷೇತ್ರಕ್ಕೆ ಸಂಬಂಧಿಸದವರು ಊರು ಬಿಟ್ಟಿದ್ದಾರೆ. ಹೀಗಾಗಿ ಶನಿವಾರ ಬಿಜೆಪಿಯ ಡಾ.ಅವಿನಾಶ ಜಾಧವ್, ಕಾಂಗ್ರೆಸ್​ನ ಸುಭಾಷ ರಾಠೋಡ್ ಸೇರಿ ಇತರ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಶನಿವಾರ ವಿವಿಧೆಡೆ ಮನೆ ಮನೆ ಪ್ರಚಾರ ನಡೆಸಿದರು.

ಊಟ ಸರಿಯಿಲ್ಲವೆಂದು ಪ್ರತಿಭಟನೆ

ಕುಂದಗೋಳ ಉಪಚá-ನಾವಣೆಗೆ ನಿಯೋಜಿತರಾದ ಸಿಬ್ಬಂದಿ ಊಟದ ವ್ಯವಸ್ಥೆ ಸರಿಯಾಗಿಲ್ಲ ಎಂದು ಆರೋಪಿಸಿ ಶನಿವಾರ ಮಧ್ಯಾಹ್ನ ಕುಂದಗೋಳ ಹರಭಟ್ಟ ಶಾಲಾ ಆವರಣ ದಲ್ಲಿ ಪ್ರತಿಭಟಿಸಿದರು. ಇವಿಎಂ, ವಿವಿಪ್ಯಾಟ್ ಕಿಟ್​ಗಳನ್ನು ಪಡೆದು ಸಿಬ್ಬಂದಿ ಊಟ ಮುಗಿಸಿ ಮಧ್ಯಾಹ್ನ 2 ಗಂಟೆಗೆ ತೆರಳಬೇಕಿತ್ತು. ಆದರೆ, ಮಧ್ಯಾಹ್ನ 1.30 ಗಂಟೆಯಾದರೂ ಊಟದ ವ್ಯವಸ್ಥೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಊಟಕ್ಕಾಗಿ ವೇತನ ಕಡಿತಗೊಳಿಸಿರುವ 150 ರೂ.ವನ್ನು ಮರಳಿ ನಿಡಬೇಕೆಂದು ಒತ್ತಾಯಿಸಿದರು.

ವಿಸರ್ಜನೆ ಸುಲಭವಲ್ಲ

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರ ವಿಸರ್ಜಿಸಬೇಕೆಂಬ ಮೈತ್ರಿ ಪಕ್ಷದವರ ಹೇಳಿಕೆಯಿಂದ ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ, ಸರ್ಕಾರ ವಿಸರ್ಜನೆ ಸುಲಭದ ಕೆಲಸವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಮೈತ್ರಿ ಸರ್ಕಾರದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದು, ಸಿಎಂ ಏನೂ ಪ್ರತಿಕ್ರಿಯೆ ಕೊಡುತ್ತಿಲ್ಲ. ಅಲ್ಲಿ ಗೊಂದಲ ಉಲ್ಬಣಗೊಂಡಿದೆ. ಮೈತ್ರಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲವೆಂಬ ನಮ್ಮ ಹೇಳಿಕೆ ನಿಜವಾಗುವ ದಿನಗಳು ಸಮೀಪಿಸಿವೆ. ಸರ್ಕಾರಕ್ಕಿನ್ನು ಉಳಿಗಾಲ ಇಲ್ಲವೆಂದರು.

Leave a Reply

Your email address will not be published. Required fields are marked *