ಕುಂಬ್ಳೆ ಬಾರಿಸಿದ ಚೊಚ್ಚಲ ಶತಕ ನೆನಪಿಸುತ್ತಿದೆ ಈ ದಿನ

ನವದೆಹಲಿ: ಇಂಗ್ಲೆಂಡ್​ನ ಓವಲ್​ ಕ್ರೀಡಾಂಗಣದಲ್ಲಿ 2007ರ ಆಗಸ್ಟ್​ 10ರ ಇದೇ ದಿನ ಇಂಗ್ಲೆಂಡ್​ ಮತ್ತು ಭಾರತದ ನಡುವೆ ಟೆಸ್ಟ್​ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಅವಿಸ್ಮರಣೀಯ ದಾಖಲೆಯೊಂದು ಸಂಭವಿಸಿತ್ತು. ಅದಾಗಲೇ 17 ರ್ವಷಗಳ ಹಿಂದೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಆಟಗಾರರೊಬ್ಬರು ತಮ್ಮ ಚೊಚ್ಚಲ ಶತಕ ಭಾರಿಸಿ ಸಂಭ್ರಮಿಸಿದ್ದರು.

ಆ ಆಟಗಾರ ಬೇರಾರು ಅಲ್ಲ, ಕನ್ನಡಿಗ ಅನಿಲ್​ ಕುಂಬ್ಳೆ. ಭಾರತೀಯ ಟೆಸ್ಟ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಅನಿಲ್​ ಕುಂಬ್ಳೆ ತಮ್ಮ ಮೊದಲ ಶತಕ ಭಾರಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ 17 ವರ್ಷಗಳ ನಂತರ. ತಮ್ಮ 389ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ (ಕ್ರಿಕೆಟ್​ನ ಎಲ್ಲಾ ಪ್ರಕಾರಗಳ ಪಂದ್ಯಗಳನ್ನೊಳಗೊಂಡು) ಆಗಸ್ಟ್​ 10, 2007ರಲ್ಲಿ ಕುಂಬ್ಳೆ ಈ ಸಾಧನೆ ಮಾಡಿದ್ದರು. ಅದೂ ಇಂಗ್ಲೆಂಡ್​ನ ಕ್ಲಿಷ್ಟಕರ ಪಿಚ್​ನಲ್ಲಿ ಅವರಿಗೆ ಶತಕ ಲಭಿಸಿತ್ತು.

ಆ ಪಂದ್ಯದಲ್ಲಿ 110* (193) ರನ್​ ಗಳಿಸಿದ್ದ ಕುಂಬ್ಳೆ ಅವರ ನೆರವಿನಿಂದ ಭಾರತ 664 ರನ್​ ಗಳಿಸಿತ್ತು. ಬೌಲಿಂಗ್​ ವಿಭಾಗದಲ್ಲಿ ಅದಾಗಲೇ ಸಾಕಷ್ಟು ಸಾಧನೆ ಮಾಡಿದ್ದ ಕುಂಬ್ಳೆ, ಶತಕದ ಮೂಲಕ ತಮ್ಮ ಬ್ಯಾಟಿಂಗ್​ನಲ್ಲಿಯೂ ಶಕ್ತಿ ಇದೆ ಎಂದು ಅಂದು ಸಾಬೀತು ಮಾಡಿದ್ದರು.

ಭಾರತದ ಪರವಾಗಿ ಮೊದಲ ಶತಕ ಗಳಿಸಿದ ಅತ್ಯಂತ ಹಿರಿಯ (36 ವರ್ಷ 296 ದಿನ ವಯಸ್ಸು) ಆಟಗಾರ ಎಂಬ ದಾಖಲೆಯೂ ಕುಂಬ್ಳೆ ಅವರ ಹೆಸರಲ್ಲಿದೆ.