ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಪುಣ್ಯಸ್ನಾನ ಮಾಡಿದ ಲಕ್ಷಾಂತರ ಭಕ್ತರು

ಪ್ರಯಾಗ್​ರಾಜ್​ (ಅಲಹಾಬಾದ್​): ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂಬ ದಾಖಲೆ ಬರೆಯಲು ಸಜ್ಜಾಗಿರುವ ಅರ್ಧ ಕುಂಭ ಮೇಳಕ್ಕೆ ಇಂದು ವಿಧ್ಯುಕ್ತವಾಗಿ ಚಾಲನೆ ದೊರೆತಿದ್ದು, ಲಕ್ಷಾಂತರ ಭಕ್ತರು ಬೆಳಗ್ಗೆ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ.

ಉತ್ತರಾಯಣ ಪುಣ್ಯ ಕಾಲದಲ್ಲಿ ತ್ರಿವೇಣಿ ಸಂಗಮದಲ್ಲಿ ಮಿಂದೇಳಲು 13 ಅಖಾಡಗಳ ಸಹಸ್ರಾರು ಸಾಧು- ಸಂತರು, ಲಕ್ಷಾಂತರ ಭಕ್ತರು ಸೋಮವಾರ ರಾತ್ರಿಯಿಂದಲೇ ಗಂಗಾ, ಯಮುನಾ, ಸರಸ್ವತಿ ನದಿ ಸಂಗಮ ತಟದಲ್ಲಿ ನೆರೆದಿದ್ದರು. ಕೊರೆಯುವ ಚಳಿಯನ್ನೂ ಲೆಕ್ಕಿಸಿದೆ ಮಂಗಳವಾರ ಮುಂಜಾನೆಯೇ ಮೊದಲ ಶಾಹಿ (ಪುಣ್ಯ) ಸ್ನಾನ ಮಾಡಿದ್ದಾರೆ.

ಇಂದಿನಿಂದ ಮಹಾಶಿವರಾತ್ರಿ (ಮಾರ್ಚ್​ 4)ರವರೆಗೆ 50 ದಿನಗಳವರೆಗೆ ಅರ್ಧ ಕುಂಭ ಮೇಳ ನಡೆಯಲಿದ್ದು, ಸುಮಾರು 12 ಕೋಟಿ ಜನರು ಕುಂಭಮೇಳಕ್ಕೆ ಭೇಟಿ ನೀಡಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ. 2013ರಲ್ಲಿ ನಡೆದಿದ್ದ ಅರ್ಧ ಕುಂಭ ಮೇಳದಲ್ಲಿ 12 ಕೋಟಿ ಜನರು ಪಾಲ್ಗೊಂಡಿದ್ದರು.

ಕುಂಭ ಮೇಳದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಶುಭ ಕೋರಿದ್ದಾರೆ. (ಏಜೆನ್ಸೀಸ್​)