ಸಂಭ್ರಮದ ಉತ್ತೂರ ಬಸಯ್ಯಜ್ಜನವರ ಜಾತ್ರೆ

ಮುಧೋಳ: ತಾಲೂಕಿನ ಉತ್ತೂರು ಗ್ರಾಮದ ಕಾಯಕಯೋಗಿ ಲಿಂ.ಬಸಯ್ಯ ಅಜ್ಜನವರ ಜಾತ್ರೆ ನಿಮಿತ್ತ ಸೋಮವಾರ ಗ್ರಾಮ ಬಳಿಯ ಘಟಪ್ರಭೆ ನದಿಗೆ ಮಠಾಧೀಶರ ನೇತೃತ್ವದಲ್ಲಿ ನೂರಾರು ಭಕ್ತರು ಗಂಗಾಪೂಜೆ, ಕುಂಭಾಭಿಷೇಕ ನೆರವೇರಿಸಿದರು.

ಹಿರೇಪಡಸಲಗಿಯ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಪಟ್ಟದೇವರು ಆಶೀರ್ವಚನ ನೀಡಿ, ನುಡಿದಂತೆ ನಡೆದು ಕಾಯಕವೇ ಕೈಲಾಸ ಎಂಬ ವಿಶ್ವಜ್ಯೋತಿ ಬಸವಣ್ಣನವರ ಕಾಯಕ ತತ್ವವನ್ನು ಪಾಲಿಸಿ 21ನೇ ಶತಮಾನದಲ್ಲಿ ಕಾಯಕ, ಲಿಂಗಪೂಜೆ ಬಗ್ಗೆ ಬೋಧಿಸುವ ಮೂಲಕ ಸಾವಿರಾರು ಭಕ್ತರಿಗೆ ಅನ್ನ, ಜ್ಞಾನದಾಸೋಹ ಮಾಡಿದ ಕೀರ್ತಿ ಪುರುಷ ಬಸಯ್ಯಜ್ಜನವರಿಗೆ ಸಲ್ಲುತ್ತದೆ ಎಂದರು.

ಶಿವಶರಣ ಮಂಟಪದಲ್ಲಿ ಬುತ್ತಿಪೂಜೆ, ವಿವಿಧ ಕಲಾವಿದರಿಂದ ಶಿವಭಜನೆ ನಡೆದವು. ಇಂಗಳಗಿ ಹಿರೇಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಉತ್ತೂರ ಹಿರೇಮಠದ ನೂರಂದಯ್ಯ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಶಿವ ಶರಣ ಮಂಟಪ ಟ್ರಸ್ಟ್ ಕಮಿಟಿ ಸದಸ್ಯರು, ಭಕ್ತರು ಇದ್ದರು.

ಇಂದು ಮಹಾರಾದ್ರಾಭಿಷೇಕ, ವರದಶಂಕರ ಪೂಜೆ:

ಕಾರ್ತಿಕ ಶುದ್ಧ ದ್ವಾದಶಿ ನ.20ರಂದು ಬೆಳಗ್ಗೆ 9 ಗಂಟೆಗೆ ಶಿವಶರಣ ಮಂಟಪದಲ್ಲಿ ವರದಶಂಕರ ಪೂಜೆ ನೆರವೇರಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಏರ್ಪಡಿಸಲಾಗಿದೆ ಎಂದು ಶರಣ ಮಂಟಪ ಟ್ರಸ್ಟ್ ಕಮಿಟಿ ತಿಳಿಸಿದೆ.

ಎಂಡಿಎಲ್19-2: ತಾಲೂಕಿನ ಉತ್ತೂರ ಗ್ರಾಮ ಬಳಿ ಹರಿದಿರುವ ಘಟಪ್ರಭೆ ನದಿಗೆ ಸೋಮವಾರ ನೂರಾರು ಭಕ್ತರು ಹಾಗೂ ಮಠಾಧೀಶರು ಗಂಗಾಪೂಜೆ, ಕುಂಭಾಭಿಷೇಕ ನೆರವೇರಿಸಿದರು.