ಕಳೆಗಟ್ಟಿದ ಕುಮಾರಿ ಪೂಜೆ

ಸವಣೂರ: ತಾಲೂಕಿನ ಹತ್ತಿಮತ್ತೂರ ಗ್ರಾಮದ ಶ್ರೀ ದ್ಯಾಮವ್ವ ದೇವಿ (ಗ್ರಾಮದೇವತೆ) ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ 9 ದಿನ ದೇವಿ ಪುರಾಣ ಪಠಣ ಹಾಗೂ 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ದೇವಿಯಂತೆ ಅಲಂಕರಿಸಿ ಕುಮಾರಿ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಯಿತು.

ಗ್ರಾಮದ ನೂರಾರು ಭಕ್ತರು ದೇವಿಯ ದರ್ಶನ ಪಡೆದರು. ದೇವಿಯ ರೂಪದಂತೆ ಅಲಂಕರಿಸಿದ್ದ ಕುಮಾರಿ ಪೂಜಾ ಕಾರ್ಯಕ್ರಮ ಕಳೆಗಟ್ಟಿತ್ತು. ಹೆಣ್ಣು ಮಗುವನ್ನು ನಾನಾ ವಿಧಗಳಿಂದ ಪೂಜೆ ಮಾಡಿ ಮಂತ್ರ ಘೊಷಣೆಗಳೊಂದಿಗೆ ದೇವಿಯನ್ನು ಸ್ತುತಿಸಲಾಯಿತು.

ಗುರುವಾರ ಬೆಳಗ್ಗೆ ಗ್ರಾಮದ ಕಲ್ಯಾಣಕ್ಕಾಗಿ ಹೋಮ, ಹವನ, ನವದುರ್ಗಾ ಕುಮಾರಿ ಪೂಜಾ ಕೈಗೊಳ್ಳಲಾಯಿತು. ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಪಾಲಕಿ ಉತ್ಸವ, ಸಿಡಿಮದ್ದುಗಳ ಅರ್ಭಟ ನೋಡುಗರ ಮನ ತಣಿಸಿತು.

ದೇವಸ್ಥಾನದ ಅರ್ಚಕರಾದ ಮಾನಪ್ಪ ಸಾತಮ್ಮನವರ, ಮುಖಂಡರಾದ ಶೇಖರಗೌಡ ದ್ಯಾಮನಗೌಡ್ರ, ನಿಂಗಪ್ಪ ನೆಗಳೂರ, ಬಸವಣ್ಣೆಯ್ಯ ಹಿರೇಮಠ, ವಿರೂಪಾಕ್ಷಪ್ಪ ಹಕಾರಿ, ಹನುಮಂತಪ್ಪ ಉಳ್ಳಾಗಡ್ಡಿ, ವೀರಣ್ಣ ಪಟ್ಟಣಶೆಟ್ಟಿ, ಗಿರೀಶಗೌಡ ಪಾಟೀಲ, ಇತರರು ಪಾಲ್ಗೊಂಡಿದ್ದರು. ಬಸವೇಶ್ವರ ದೇವಸ್ಥಾನದ ಭಜನಾ ಮಂಡಳಿ ವತಿಯಿಂದ ಪ್ರತಿ ದಿನ ಭಜನಾ ಕಾರ್ಯಕ್ರಮ ನೆರವೇರಿತು.