ಪ್ರಣಾಮ್ ಎಂಟ್ರಿಗೆ ವೇದಿಕೆ ಸಜ್ಜು

‘ಕುಮಾರಿ 21ಎಫ್’ ಸಿನಿಮಾ ಆ.3ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ‘ಡೈನಾಮಿಕ್ ಹೀರೋ’ ದೇವರಾಜ್ ಅವರ ಕಿರಿಯ ಪುತ್ರ ಪ್ರಣಾಮ್ ದೇವರಾಜ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಲವರ್ ಬಾಯ್ ಗೆಟಪ್​ನಲ್ಲಿ ಅವರು ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದು, ಮೊದಲ ಸಿನಿಮಾ, ಮೊದಲ ಕನಸಿನ ಬಗ್ಗೆ ನಮಸ್ತೆ ಬೆಂಗಳೂರು ಜತೆ ಅವರಾಡಿದ ಮಾತುಗಳು ಇಲ್ಲಿವೆ.

|ಮಂಜು ಕೊಟಗುಣಸಿ ಬೆಂಗಳೂರು

ಅಪ್ಪ ದೊಡ್ಡ ಹೀರೋ, ಅಣ್ಣ (ಪ್ರಜ್ವಲ್ ದೇವರಾಜ್) ಕೂಡ ಅದೇ ಹಾದಿಯಲ್ಲಿದ್ದಾರೆ. ಇದೀಗ ನಿಮ್ಮ ಎಂಟ್ರಿಯಾಗುತ್ತಿದೆ. ನಿರೀಕ್ಷೆ ಹೆಚ್ಚಿರುತ್ತದೆ. ಅದನ್ನು ಹೇಗೆ ಸ್ವೀಕರಿಸಿದ್ದೀರಿ?

ನನಗೆ ಭಯಕ್ಕಿಂತ ಜವಾಬ್ದಾರಿ ಹೆಚ್ಚು. ಅಪ್ಪ ಈಗಾಗಲೇ ಸ್ಟಾರ್. ಅಣ್ಣ ಸಹ ಗುರುತಿಸಿಕೊಂಡಿದ್ದಾರೆ. ಅವರಿಬ್ಬರ ಹೆಸರನ್ನ ಕಾಪಾಡಿಕೊಂಡು ಹೋಗಬೇಕೆಂಬುದೇ ನನ್ನ ತಲೆಯಲ್ಲಿ ಹೆಚ್ಚಿದೆ. ಈ ಮೊದಲು ಅಣ್ಣ ಚಿತ್ರರಂಗಕ್ಕೆ ಬಂದಾಗ, ಅಪ್ಪನ ಹೆಸರು ಉಳಿಸುವುದು ಅವನ ಜವಾಬ್ದಾರಿಯಾಗಿತ್ತು. ಇದೀಗ ದೇವರಾಜ್ ಮಗನಾಗಿ ಮತ್ತು ಪ್ರಜ್ವಲ್ ತಮ್ಮನಾಗಿ ಅವರಿಬ್ಬರ ಹೆಸರನ್ನು ಉಳಿಸಬೇಕಿದೆ. ಹಾಗಾಗಿ ನಿರೀಕ್ಷೆಗಳು ಹೆಚ್ಚಿರುತ್ತವೆ. ನನ್ನಿಂದ ಒಂದು ಸಿನಿಮಾಕ್ಕೆ ಏನೆಲ್ಲ ಸಿಗಬೇಕಿತ್ತೋ ಅದನ್ನು ಶೇ. 100 ಕೊಟ್ಟಿದ್ದೇನೆ ಎಂಬ ನಂಬಿಕೆ ಇದೆ. ನನ್ನ ನಟನೆ ಮೇಲೆ ನನಗೆ ಆತ್ಮವಿಶ್ವಾಸವಿದೆ. ಮುಂದೇನಾಗುತ್ತೋ ನೋಡಬೇಕು.

ಮೊದಲ ಸಿನಿಮಾದಲ್ಲಿ ಆಕ್ಷನ್​ಗೆ ಹೆಚ್ಚು ಅವಕಾಶ ಇದ್ದಂತಿಲ್ಲ. ಹೀಗಾಗಿ ನಿಮ್ಮ 2ನೇ ಸಿನಿಮಾ ಸಾಹಸಪ್ರಧಾನ ಆಗಿರಲಿದೆಯಂತೆ?

ಖಂಡಿತವಾಗಿ. ಈಗಾಗಲೇ 2ನೇ ಸಿನಿಮಾ ಒಪ್ಪಿಕೊಂಡಿದ್ದೇನೆ. ಪಕ್ಕಾ ಆಕ್ಷನ್ ಅವತಾರದಲ್ಲಿಯೇ ಬರುವ ಪ್ಲಾ್ಯನ್ ಇದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಆ ಚಿತ್ರ ತಯಾರಾಗಲಿದೆ. ಆಗಸ್ಟ್ ಕೊನೆಗೆ ಸಿನಿಮಾ ಸೆಟ್ಟೇರಲಿದೆ. ಮೊದಲ ಸಿನಿಮಾದಲ್ಲಿ ಆಕ್ಷನ್ ಇಲ್ಲ. ಇದರಲ್ಲಿ ಮಿಸ್ ಆಗಿದ್ದನ್ನು ಎರಡನೇ ಚಿತ್ರದಲ್ಲಿ ತೋರಿಸಲಿದ್ದೇನೆ. ಆಕ್ಷನ್ ಸಿನಿಮಾಗೆ ತಕ್ಕಂತೆ ತಯಾರಿಯೂ ನಡೆಯುತ್ತಿದೆ. ಪಿಯು ಓದುತ್ತಿದ್ದಾಗಲೇ ಜಿಮ್ನಾಸಿಕ್ಸ್ ಮಾಡುತ್ತಿದ್ದೆ. ಇತ್ತೀಚೆಗೆ ಕಿಕ್ ಬಾಕ್ಸಿಂಗ್ ಕಲಿಯುತ್ತಿದ್ದೇನೆ.

ಇಂಡಸ್ಟ್ರಿಯಲ್ಲಿ ಯಾವ ರೀತಿ ಗುರುತಿಸಿಕೊಳ್ಳಬೇಕೆಂಬ ಗುರಿ ನಿಮ್ಮದು?

ಇಂಥದ್ದೇ ಪಾತ್ರ ಮಾಡಬೇಕೆಂದು ಅಂದುಕೊಂಡು ಬಂದಿಲ್ಲ. ಆ ಬಗ್ಗೆ ಯೋಚನೆ ಮಾಡಿಲ್ಲ. ಎಲ್ಲ ರೀತಿಯ ಪಾತ್ರಗಳನ್ನೂ ಮಾಡಬೇಕೆಂಬುದು ನನ್ನ ಆಸೆ. ಜನ ಯಾವುದನ್ನು ಒಪ್ಪಿಕೊಳ್ಳುತ್ತಾರೆ, ಯಾವ ಶೇಡ್ ಇಷ್ಟಪಡುತ್ತಾರೆ ಎಂಬುದರ ಮೇಲೆ ಮುಂದಿನ ಪ್ರಾಜೆಕ್ಟ್​ಗಳು ನಿರ್ಧಾರವಾಗುತ್ತವೆ. ಮೊದಲಿಗೆ ಲವರ್​ಬಾಯ್ ಆಗಿ ಎಂಟ್ರಿ ಕೊಡುತ್ತಿದ್ದೇನೆ. ಮುಂದಿನ ಸಿನಿಮಾ ಆಕ್ಷನ್ ರೀತಿಯಲ್ಲಿ ಇರಲಿದೆ.ಹೀಗಾಗಿ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಮುಂದಿನ ಸಿನಿಮಾಗಳ ಆಯ್ಕೆ ನಿಂತಿದೆ.

ನಟನೆ ಬಿಟ್ಟು ಸಿನಿಮಾಕ್ಕೆ ಸಂಬಂಧಿಸಿದ ಬೇರೆ ಯಾವ ವಿಭಾಗ ನಿಮಗಿಷ್ಟ?

ಚಿಕ್ಕ ವಯಸ್ಸಿನಿಂದಲೇ ನಟನಾಗಬೇಕೆಂದುಕೊಂಡೇ ಬಂದಿದ್ದೇನೆ. ಎಂಟು ವರ್ಷದವನಿದ್ದಾಗ ‘ಮನಸೇ ಓ ಮನಸೇ’ ಸಿನಿಮಾದಲ್ಲಿ ಅನಂತ್​ನಾಗ್ ಮತ್ತು ರಾಮ್ುಮಾರ್ ಅವರೊಂದಿಗೆ ನಟಿಸಿದ್ದ್ದೆ. ಆಗ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿತ್ತು. ಅದೇ ರೀತಿ ಈಗಲೂ ನಟನೆ ಕಡೆಗಷ್ಟೇ ತೊಡಗಿಸಿಕೊಂಡಿದ್ದೇನೆ. ಬೇರೆ ಕಡೆ ಲಕ್ಷ್ಯ ವಹಿಸಿಲ್ಲ.

ನಿಮ್ಮ ಚಿತ್ರಕ್ಕೆ ಸ್ಟಾರ್​ಗಳ ಬೆಂಬಲ ಸಿಕ್ಕಿದೆ. ಇದು ನಿಮಗೆಷ್ಟು ಪ್ಲಸ್?

ಅಪು್ಪ ಅಣ್ಣ ಸಾಂಗ್ ಹಾಡಿದ್ದಾರೆ. ಚಿತ್ರದ ಹಾಡೊಂದನ್ನು ಗಣೇಶ್ ರಿಲೀಸ್ ಮಾಡಿದರು. ತರುಣ್ ಸುಧೀರ್, ಪ್ರೇಮ್ ವಿಜಯ್ ರಾಘವೇಂದ್ರ ಎಲ್ಲರೂ ಸೇರಿ ಇತರ ಹಾಡುಗಳನ್ನು ಬಿಡುಗಡೆ ಮಾಡಿದರು. ಇಡೀ ಇಂಡಸ್ಟ್ರಿ ನನ್ನನ್ನು ಸ್ವಾಗತಿಸುತ್ತಿದೆ. ನನ್ನನ್ನು ಸಹೋದರ ಎಂಬಂತೆ ಎಲ್ಲರೂ ಖುಷಿಯಿಂದ ವೆಲ್​ಕಮ್ ಮಾಡುತ್ತಿದ್ದಾರೆ. ಇದರಿಂದ ಒಂದು ಕಡೆ ಭಯ, ಮತ್ತೊಂದು ಕಡೆ ಸಂತಸ ಎರಡೂ ಸಿಕ್ಕ ಅನುಭವ ಆಗುತ್ತಿದೆ.

ನಟನೆ ವಿಚಾರದಲ್ಲಿ ಅಪ್ಪ ಮತ್ತು ಅಣ್ಣ ನಿಮಗೆ ಸಲಹೆ ನೀಡಿದ್ದೇನು?

ಚಿಕ್ಕ ವಯಸ್ಸಿನಿಂದ ನಾನು ಇಂಡಸ್ಟ್ರಿಯಲ್ಲೇ ಬೆಳೆದಿದ್ದು. ಅಣ್ಣನ ‘ಸಿಕ್ಸರ್’ನಿಂದ ಹಿಡಿದು, ಇಲ್ಲಿಯವರೆಗೂ ಯಾವೆಲ್ಲ ಸಿನಿಮಾ ಮಾಡಿದ್ದಾರೆ, ಆ ಎಲ್ಲ ಸೆಟ್​ಗಳಿಗೆ ಹೋಗಿ ಬಂದಿದ್ದೇನೆ. ಅಲ್ಲಿ ಕಾಲ ಕಳೆದಿದ್ದೇನೆ. ಪ್ರಾಕ್ಟಿಕಲ್ ಜ್ಞಾನವೇ ಹೆಚ್ಚು ಸಿಕ್ಕಿದೆ. ಕ್ಯಾಮರಾ ಎದುರಿಸುವುದು, ಡಾನ್ಸ್ ಮಾಡುವುದು ಮುಂತಾದ ವಿಷಯಗಳನ್ನೂ ಅಣ್ಣನಿಂದ ಕಲಿತುಕೊಂಡಿದ್ದೇನೆ. ಕೆಲವೊಂದಿಷ್ಟು ನಾನೇ ನೋಡಿ ಕಲಿತರೆ, ಮತ್ತೆ ಕೆಲವೊಂದಿಷ್ಟನ್ನು ಅವರೇ ತಿಳಿಸಿಕೊಟ್ಟಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚು ಮನೆಯೇ ಒಂದು ಇಂಡಸ್ಟ್ರಿ ರೀತಿ. ಅದೇ ನನಗೆ ನಟನಾ ಶಾಲೆ ಇದ್ದಂತೆ. ಅಪ್ಪ ಇರ್ತಾರೆ, ಅಣ್ಣ ಸಿನಿಮಾ ಬಗ್ಗೆ ಪಾಠ ಹೇಳ್ತಾನೆ.