ನಿಖಿಲ್​ಗೆ ಟಿಕೆಟ್, ಮಂಡ್ಯ ಬಿಗ್ ಫೈಟ್

| ಮಂಗಳೂರು/ಶಿವಮೊಗ್ಗ/ಮಂಡ್ಯ

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ನಡುವೆ ಏರ್ಪಟ್ಟಿರುವ ಲೋಕಸಭಾ ಕ್ಷೇತ್ರಗಳ ಹಂಚಿಕೆ ಗೊಂದಲಕ್ಕೆ ಇನ್ನೂ ತೆರೆಬಿದ್ದಿಲ್ಲ. ಅಷ್ಟರೊಳಗೆ ಮಂಡ್ಯ ಕ್ಷೇತ್ರ ತನ್ನದೇ ಎಂದು ಜೆಡಿಎಸ್ ಘೋಷಿಸಿಕೊಂಡಿದ್ದಲ್ಲದೆ, ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಹೇಳಿಕೊಂಡಿದೆ. ಇದನ್ನು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಸ್ಪಷ್ಟಪಡಿಸಿದ್ದರೆ, ಪಕ್ಷದ ವರಿಷ್ಠ ದೇವೇಗೌಡ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಸುಮಲತಾ ಅಂಬರೀಷ್ ಅವರನ್ನು ಅಭ್ಯರ್ಥಿಯನ್ನಾಗಿಸಬೇಕೆಂದು ಪಟ್ಟುಹಿಡಿದಿದ್ದ ಕಾಂಗ್ರೆಸ್ ನಡೆ ಏನು? ಸೋಮವಾರ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಯಾವ ನಿರ್ಧಾರ ಬರಲಿದೆ ಎಂಬುದು ಸದ್ಯದ ಕುತೂಹಲವಾಗಿದೆ. ಮೈತ್ರಿ ಧರ್ಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು, ಪುತ್ರ ನಿಖಿಲ್ ರಾಜಕೀಯಕ್ಕೆ ಬರಲು ಇಚ್ಛಿಸಿದರೆ ಮಂಡ್ಯ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಾರೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸುಮಲತಾ ಅಂಬರೀಷ್ ಮಂಡ್ಯದಿಂದ ಸ್ಪರ್ಧಿವುದಕ್ಕೂ ನಮಗೂ ಸಂಬಂಧವಿಲ್ಲ. ಮೈಸೂರಿನಲ್ಲಿ ನಿಖಿಲ್​ಗೆ ಅಭಿಮಾನಿಗಳಿದ್ದಾರೆ. ಅವರು ಆ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ರಾಜಕೀಯ ಪ್ರವೇಶ ಮಾಡುವುದಾದರೆ ಮಂಡ್ಯ ಕ್ಷೇತ್ರದಿಂದಲೇ ಎಂದು ಸೂಚ್ಯವಾಗಿ ಹೇಳಿದರು. ಸುಮಲತಾ ಸ್ಪರ್ಧೆ ಮಾಡುತ್ತಾರೆಂಬ ಕಾರಣಕ್ಕೆ ಮಂಡ್ಯ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ. ಪಲಾಯನವಾದ ಅಥವಾ ಹೇಡಿತನದ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ಯಾವುದೋ ಕಾರಣಕ್ಕೆ ಹೆದರಿ ಮಂಡ್ಯ ಬಿಟ್ಟು ಮೈಸೂರಿನಿಂದ ಸ್ಪರ್ಧೆ ಮಾಡುವುದಿಲ್ಲ ಎಂದರು.

ಪ್ರಜ್ವಲ್, ನಿಖಿಲ್ ಸ್ಪರ್ಧೆ ತಪ್ಪೇನು?

ಐಎಎಸ್ ಅಧಿಕಾರಿಗಳ ಮಕ್ಕಳು ಐಎಎಸ್, ಡಾಕ್ಟರ್ ಮಕ್ಕಳು ಡಾಕ್ಟರ್ ಆಗುವಂತೆ ರಾಜಕಾರಣಿಗಳ ಮಕ್ಕಳು ರಾಜಕಾರಣ ಪ್ರವೇಶಿಸುವುದು ಸಹಜ. ಹಾಗೆಯೇ ಪ್ರಜ್ವಲ್ ಮತ್ತು ನಿಖಿಲ್ ರಾಜಕಾರಣ ಪ್ರವೇಶ ಮಾಡಲಿ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡರು. ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ. ಗೊಂದಲಕ್ಕೆ ಒಳಗಾಗುವ ಪ್ರಶ್ನೆ ಇಲ್ಲ. ಶೀಘ್ರದಲ್ಲೇ ಎರಡೂ ಪಕ್ಷಗಳ ಮುಖಂಡರು ಕುಳಿತು ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದರು.

ಸುಮಲತಾ ಅಕ್ಕ ಸ್ವತಂತ್ರರು,

ಜೆಡಿಎಸ್ ವರಿಷ್ಠರು ನನ್ನ ಹೆಸರು ಘೊಷಿಸಿರು ವುದಕ್ಕೆ ಆಭಾರಿಯಾಗಿದ್ದು, ಇಷ್ಟರಲ್ಲೇ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ನನ್ನ ಸೇವೆ ಆರಂಭವಾಗಲಿದ್ದು, ಮಂಡ್ಯದಲ್ಲೇ ಮನೆ ಮಾಡುತ್ತೇನೆ ಮತ್ತು ಕಚೇರಿಯನ್ನೂ ತೆರೆಯುತ್ತೇನೆ ಎಂದು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ತಿಳಿಸಿದರು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಸುಮಲತಾ ಅಕ್ಕ ಅವರ ಸ್ಪರ್ಧೆ ಬಗ್ಗೆ ನಾನು ಏನೂ ಹೇಳಲ್ಲ. ಆ ವಿಷಯದಲ್ಲಿ ಅವರು ಸ್ವತಂತ್ರರು. ಅಭಿಷೇಕ್ ನನ್ನ ತಮ್ಮನಿದ್ದಂತೆ. ಅವರ ಜತೆಯೂ ಮಾತಾಡ್ತೀನಿ. ಅಂತೆಯೇ, ಜಿಲ್ಲೆಯ ಕಾಂಗ್ರೆಸ್ ನಾಯಕರನ್ನೂ ಭೇಟಿ ಮಾಡ್ತೀನಿ ಎಂದು ಹೇಳಿದರು.

ಮೊಮ್ಮಕ್ಕಳಲ್ಲಿ ತಾರತಮ್ಯ ಮಾಡಲ್ಲ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಕಾರ್ಯಕರ್ತರೊಂದಿಗೆ ರ್ಚಚಿಸಿ ನಿಖಿಲ್​ಗೆ ಅಭ್ಯರ್ಥಿಯಾಗಲು ಸೂಚಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನಿಖಿಲ್​ಗೆ ನಿಜಕ್ಕೂ ಇನ್ನೂ ಎರಡು ವರ್ಷ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಇಷ್ಟವಿರಲಿಲ್ಲ, ಆದರೆ, ಅವರ ಅಭಿಮಾನಿಗಳು, ಕಾರ್ಯಕರ್ತರು ಅವರಿಗಿರುವ ಗ್ಲಾಮರ್ ಕಾರಣದಿಂದ ಸ್ಪರ್ಧೆ ಮಾಡುವಂತೆ ಒತ್ತಾಸೆ ಹಾಕಿದ್ದಾರೆ. ಮುಂದೆ ತಾತನಿಗೆ ಪ್ರಜ್ವಲ್ ಮೇಲೆ ಮಾತ್ರ ಆಸಕ್ತಿ ಎಂದು ಹೇಳಬಾರದು, ಅದಕ್ಕಾಗಿ ನಿಖಿಲ್ ಕೂಡ ಸ್ಪರ್ಧೆ ಮಾಡಬಹುದು ಎಂದೆ. ಹಾಸನದ ರೀತಿಯಲ್ಲೇ ಮಂಡ್ಯ ಕೂಡ ಹಿಂದಿನಿಂದಲೂ ಜೆಡಿಎಸ್ ಪ್ರಾಬಲ್ಯದ ಕ್ಷೇತ್ರ, ಅಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಲು ಸುಮಲತಾ ಅಪೇಕ್ಷೆ ಪಟ್ಟಿರುವುದು ತಪ್ಪಲ್ಲ. ಆದರೆ, ಜೆಡಿಎಸ್​ಗೆ ಅಲ್ಲಿ ಮೇಲುಗೈ ಸಾಧಿಸಲು ಹೆಚ್ಚಿನ ಅವಕಾಶವಿದೆ ಎಂದು ತಿಳಿಸಿದರು.

ಮೈತ್ರಿಗೆ ಅಪಾಯವಾಗಲು ಬಿಡೆ

ಲೋಕಸಭಾ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಒಗ್ಗಟ್ಟಾಗಿ ಹೋರಾಡುವ ಉದ್ದೇಶದಿಂದ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡುವುದಿಲ್ಲ ಎಂದು ದೇವೇಗೌಡ ಹೇಳಿದರು. ಇನ್ನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೊಷಣೆಯಾಗುವ ನಿರೀಕ್ಷೆ ಇದೆ. ಸೀಟು ಹಂಚಿಕೆ ಕುರಿತು ಭಿನ್ನಾಭಿಪ್ರಾಯ ಇದೆ ಎನ್ನುವ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಇನ್ನು ಮೈತ್ರಿಗೆ ಅಪಾಯ ತರುವ ಯಾವುದೇ ಸನ್ನಿವೇಶ ಸೃಷ್ಟಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮದು ರಾಜಕೀಯ ಕುಟುಂಬ ಅಲ್ಲ, ರೈತ ಕುಟುಂಬ. ನನ್ನ ತಂದೆ ರೈತ. ರೇವಣ್ಣ ರಾಜಕೀಯಕ್ಕೆ ಬರೋದು ನನಗೆ ಇಷ್ಟ ಇರಲಿಲ್ಲ. ಅವರಿಗೋಸ್ಕರ ಇಂಡಸ್ಟ್ರಿಯಲ್ ಸೈಟ್ ತೆಗೊಂಡಿದ್ದರೂ ಈ ಕ್ಷೇತ್ರಕ್ಕೆ ಬಂದರು. ಸಿನಿಮಾ ಕ್ಷೇತ್ರದಲ್ಲಿದ್ದ ಕುಮಾರಸ್ವಾಮಿ ಕೂಡ ರಾಜಕೀಯಕ್ಕೆ ಆಸಕ್ತಿಯಿಂದ ಬಂದರು. ನಾನು ಕುಟುಂಬವನ್ನು ಈ ಕ್ಷೇತ್ರಕ್ಕೆ ಎಳೆದು ತಂದಿಲ್ಲ.

| ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ

ಮಾಜಿ ಪ್ರಧಾನಿ ದೇವೇಗೌಡರ ಮಾತನ್ನು ಕೇಳುವ ಸರ್ಕಾರ ಕೇಂದ್ರದಲ್ಲಿ ರಚನೆಯಾಗುವ ಸಾಧ್ಯತೆ ಇದೆ. ಇದಕ್ಕೆ ತಾಯಿ ಶೃಂಗೇರಿ ಶಾರದೆ ಆಶೀರ್ವಾದವೂ ಇದೆ.

| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಸುಮಲತಾ ಅಂಬರೀಷ್ ಸ್ಪರ್ಧೆಗೆ ಟಿಕೆಟ್ ಕೇಳುವುದ ರಲ್ಲಿ ತಪ್ಪಿಲ್ಲ. ಆ ಬಗ್ಗೆ ವರಿಷ್ಠರು ಅಂತಿಮ ನಿರ್ಣಯ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್​ಗೆ ಮಂಡ್ಯ ಕ್ಷೇತ್ರ ಸಿಕ್ಕರೆ ತಾನೆ ಅವರು ಸ್ಪರ್ಧಿಸೋದು?

| ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸುವುದಾದರೆ ಬಿಜೆಪಿ ಬೆಂಬಲ ನೀಡಲಿದೆ. ಅವರು ಪಕ್ಷಕ್ಕೆ ಬರುವುದಿದ್ದರೂ ಸ್ವಾಗತ. ಸಿಎಂ ಪುತ್ರ ನಿಖಿಲ್​ಗೆ ಮಂಡ್ಯದಲ್ಲಿ ಟಿಕೆಟ್ ನೀಡುವುದು ಜೆಡಿಎಸ್​ನ ಆಂತರಿಕ ವಿಚಾರ.

| ಶೋಭಾ ಕರಂದ್ಲಾಜೆ, ಸಂಸದೆ