ತಂದೆಯನ್ನೇ ಮನೆಯಿಂದ ಹೊರಹಾಕಿದ್ದ ಕುಮಾರಸ್ವಾಮಿ: ಬಿಜೆಪಿ ಪ್ರಚಾರದಲ್ಲಿ ವೇಳೆ ಮಾಧುಸ್ವಾಮಿ ಮಾತನಾಡಿದ ವಿಡಿಯೋ ವೈರಲ್

ತುಮಕೂರು: ಈಗ ಸಿಎಂ ಆಗಿರುವ ಎಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ತಂದೆ ಮಾಜಿ ಪ್ರಧಾನಿ ದೇವೇಗೌಡರನ್ನೇ ಮನೆಯಿಂದ ಹೊರಹಾಕಿದ್ದರು ಎಂದು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ಚಾಮಿ ಸಿಎಂ ವಿರುದ್ಧ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಮಾಜಿ ಪ್ರದಾನಿ ದೇವೇಗೌಡರನ್ನು ಕುಮಾರಸ್ವಾಮಿ ಮನೆಯಿಂದ ಹೊರಹಾಕಿದ್ದರು. ಕುಮಾರಪಾರ್ಕ್​ನ ಹತ್ತಿರದ ಸಣ್ಣ ಮನೆಯಲ್ಲಿ ಅವರು ವಾಸ ಮಾಡುತ್ತಿದ್ದರು. ಬಾಕ್ಸ್​​ನಲ್ಲಿ ಅವರಿಗೆ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದವರು ನಾವು ಅವರ ಮಕ್ಕಳಲ್ಲ. ಉಗ್ರಪ್ಪ ದೇವೇಗೌಡರ ಬೆನ್ನು ಉಜ್ಜುತ್ತಿದ್ದರು. ಆಗ ಯಾವ ಮಕ್ಕಳು ಅವರನ್ನು ನೋಡಿಕೊಳ್ಳುತ್ತಿರಲಿಲ್ಲ. ಈಗ ಕುಮಾರಸ್ವಾಮಿ ನನ್ನ ಮುಂದೆ ಬರಲಿ ಯಾಕಪ್ಪ ಅವತ್ತು ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಅಂತ ಹೇಳ್ತೀನಿ ಎಂದು ಮಾಧುಸ್ವಾಮಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.


ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ ಯಾರೋ ಅವರಿಗೆ ಕಲ್ಲಲ್ಲಿ ಹೊಡೆದರು. ಆಗ ನಾನು ಅವರಿಗೆ ಎದೆಕೊಟ್ಟು ನಿಂತೆ. ನನ್ನ ಮಕ್ಕಳು ಈ ರೀತಿ ಕಲ್ಲಿನ ಪೆಟ್ಟು ತಿಂದಿರಲಿಲ್ಲ ಎಂದು ನನ್ನ ತಬ್ಬಿಕೊಂಡು ದೇವೇಗೌಡರು ಅತ್ತಿದ್ದರು. ಮಾಸನ ಪುತ್ರ ಬಿ.ಎಲ್ ಶಂಕರ್ ಮತ್ತು ವೈ.ಕೆ ರಾಮಯ್ಯ ಯಾಕೆ ಪಕ್ಷ ಬಿಟ್ಟು ಆಚೆ ಹೋದರು. ರಾಜಕೀಯ ಜೀವನದಲ್ಲಿ ನಾನು ಕುಮಾರಸ್ವಾಮಿಗಿಂತ ಹಿರಿಯನಾಗಿದ್ದೇನೆ ಎಂದು ಮಾಧುಸ್ವಾಮಿ ಆ ವಿಡಿಯೋದಲ್ಲಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. (ದಿಗ್ವಿಜಯ ನ್ಯೂಸ್​)