ಅಣ್ಣನ ನೋಟು-ಅಕ್ಕನಿಗೆ ವೋಟು: ಮಂಡ್ಯದಲ್ಲಿ ಎಷ್ಟು ಕೋಟಿ ಖರ್ಚು ಮಾಡಿದರೂ ಕುಮಾರಸ್ವಾಮಿ ಕಣ್ಣೀರು ಹಾಕುವ ಪರಿಸ್ಥಿತಿ ಇದೆ!

ಶಿವಮೊಗ್ಗ: ಇನ್ನು ಮುಂದೆ ಸಾರ್ವಜನಿಕವಾಗಿ ಕಣ್ಣೀರು ಹಾಕುವುದಿಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿ ನಿನ್ನೆ ಸಾರ್ವಜನಿಕ ಸಭೆಯಲ್ಲಿ‌‌ ಮತ್ತೆ ಕಣ್ಣೀರು ಹಾಕಿದ್ದಾರೆ. ಮಂಡ್ಯದಲ್ಲಿ ಎಷ್ಟು ಕೋಟಿ ಖರ್ಚು ಮಾಡಿದರೂ ಕುಮಾರಸ್ವಾಮಿ ಕಣ್ಣೀರು ಹಾಕುವ ಪರಿಸ್ಥಿತಿ ಇದೆ ಎಂದು ಬಿಜೆಪಿ ನಾಯಕ, ಬಿ. ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಅವರ ಜಾಗದಲ್ಲಿ ಯಾರೇ ಇದ್ದರೂ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಬಹುಶಃ ಕುಮಾರಸ್ವಾಮಿ ಅವರು ಪರ್ಮನೆಂಟಾಗಿ ಕಣ್ಣೀರು ಹಾಕಿಕೊಂಡು ಇರಬೇಕಾದ ಪರಿಸ್ಥಿತಿ ಇದೆ. ಅಣ್ಣನ ನೋಟು- ಅಕ್ಕನಿಗೆ ವೋಟು ಎಂಬ ಸ್ಲೋಗನ್ ಈಗ ಮಂಡ್ಯದಲ್ಲಿ ವ್ಯಾಪಕವಾಗಿದೆ. ಬಿಜೆಪಿ ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಆದರೆ ಜೆಡಿಎಸ್- ಕಾಂಗ್ರೆಸ್ ನಾಯಕರು ಅನಧಿಕೃತವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ಕುಂಬಳಕಾಯಿ ಕಳ್ಳ‌ ಎಂದರೆ ಕುಮಾರಸ್ವಾಮಿ, ರೇವಣ್ಣ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಜಾತಿ, ಪಕ್ಷ, ಧರ್ಮದ ಆಧಾರದಲ್ಲಿ ಐಟಿ ದಾಳಿಯಾಗುವುದಿಲ್ಲ. ಹಾಸನ, ಮಂಡ್ಯದಲ್ಲಿ ದಾಳಿ ಆದಾಗ ಆಡಳಿತ ಪಕ್ಷ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಖಚಿತವಾಗಿದೆ. ಆಗದ ಕೆಲಸಗಳಿಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಗುತ್ತಿಗೆದಾರರು, ಉದ್ಯಮಿಗಳು ಅವರ ಸಂಬಂಧಿಗಳಾಗಿದ್ದರೆ ಅದು ಕಾಕತಾಳಿಯ ಅಷ್ಟೇ ಎಂದು ತಿಳಿಸಿದರು.

30-35 ವರ್ಷಗಳಿಂದ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದಾರೆ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಬಡವರು, ದಲಿತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಇನ್ನೂ ಹತ್ತು- ಹದಿನೈದು ವರ್ಷ ಸಕ್ರೀಯ ರಾಜಕಾರಣದಲ್ಲಿ ಇರುತ್ತಾರೆ. ಯಡಿಯೂರಪ್ಪ ರಾಜಕೀಯ ನಿವೃತ್ತಿಯ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿ ಎಸ್‌ ಯಡಿಯೂರಪ್ಪ ಮಾತನಾಡಿ, ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಕಾಂಗ್ರೆಸ್‌ ಎಂಥ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಎಂ.ಬಿ. ಪಾಟೀಲ್ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ರಾಜ್ಯ ನಾಯಕರು ಬಿಜೆಪಿ ಜನ ಬೆಂಬಲ ನೋಡಿ ಗಾಬರಿಯಾಗಿದ್ದಾರೆ. ಕಾಂಗ್ರೆಸ್ ಧರ್ಮ ಒಡೆಯುವ ಹೀನ ಕೆಲಸಕ್ಕೆ ಕೈ ಹಾಕಿದ್ದಾರೆ. ವೀರಶೈವ ಮತ್ತು ಲಿಂಗಾಯತ ಎಂಬ ವಿಷ ಬೀಜವನ್ನು ಮತ್ತೆ ಬಿತ್ತಿದ್ದಾರೆ. ಇದು ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ ಎಂದರು.

ಸಿಎಂ ಕಣ್ಣೀರು ವಿಚಾರವಾಗಿ ಅನುಕಂಪ ಪಡೆಯಲು ಈ ರೀತಿ ಮಾಡುತ್ತಿದ್ದಾರೆ‌. ಸೋಲಿನ ಭಯ ಕಾಡುತ್ತಿದೆ. ಅನುಮಾನ ಇರುವ ಗುತ್ತಿಗೆದಾರರ ಮೇಲೆ ಐಟಿ ದಾಳಿಯಾಗುತ್ತದೆ. ಇದು ಸ್ವಾಭಾವಿಕವಾಗಿ ನಡೆಯುವಂತಹದ್ದು ರಾಜಕೀಯ ಎಲ್ಲಿಂದ ಬಂತು. ಮಂಡ್ಯ, ಮೈಸೂರು, ಹಾಸನದಲ್ಲಿ ಗುತ್ತಿಗೆದಾರರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

2 Replies to “ಅಣ್ಣನ ನೋಟು-ಅಕ್ಕನಿಗೆ ವೋಟು: ಮಂಡ್ಯದಲ್ಲಿ ಎಷ್ಟು ಕೋಟಿ ಖರ್ಚು ಮಾಡಿದರೂ ಕುಮಾರಸ್ವಾಮಿ ಕಣ್ಣೀರು ಹಾಕುವ ಪರಿಸ್ಥಿತಿ ಇದೆ!”

  1. ಸ್ವಲ್ಪ ಸಂಯಮ ಇರಲಿ, ಮಂಡ್ಯದ ಜನತೆಯ ನಿರ್ಧಾರ ಇನ್ನೊಂದು ತಿಂಗಳಲ್ಲಿ ಗೊತ್ತಾಗಲಿದೆ, ಕಾಡು ನೋಡೋಣ. – ಗುಂಜ್ಮ೦ಜ (GUNJMANJA)

  2. “ಅಳೋ ಗಂಡಸನ್ನ ನಗೋ ಹೆಂಗಸನ್ನ ನಂಬಬಾರದು ”
    ಅನ್ನೋದು ಕನ್ನಡದ ಜನಪ್ರಿಯ ಗಾದೆ .ರವಿ

Leave a Reply

Your email address will not be published. Required fields are marked *