Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಹಳೇ ಮೈಸೂರಿಗೆ ಎಚ್​ಡಿ ಕ್ವಾಲಿಟಿ!

Friday, 06.07.2018, 3:08 AM       No Comments

2018ರ ಫೆ. 16ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಿಗೆ ಭರಪೂರ ಕೊಡುಗೆ ನೀಡಿದಂತೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗಳ ಜನರ ಋಣ ತೀರಿಸಲು ಮುಂದಾಗಿದ್ದು, ಹಳೇ ಮೈಸೂರು ಭಾಗಕ್ಕೆ ಭಾರಿ ಕೊಡುಗೆ ನೀಡಿದ್ದಾರೆ. ಜೆಡಿಎಸ್​ನ 37 ಶಾಸಕರ ಕ್ಷೇತ್ರಗಳಿಗೆ ಭರಪೂರ ಕೊಡುಗೆ ನೀಡಿದ್ದಾರೆ. ಉಳಿದ ಕೆಲವು ಅಪವಾದವೆಂಬಂತೆ ತೋರಿಕೆಗೆ ಯೋಜನೆಗಳನ್ನು ಘೋಷಿಸಿದ್ದು ಬಿಟ್ಟರೆ ಕರಾವಳಿ, ಮಧ್ಯಕರ್ನಾಟಕ, ಉತ್ತರಕರ್ನಾಟಕ ಹಾಗೂ ಮಲೆನಾಡು ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಯಾವ ಜಿಲ್ಲೆಗಳಿಗೆ ಏನೇನು ಕೊಡುಗೆ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.


ಗ್ರಾಮೀಣಾಭಿವೃದ್ಧಿಗೆ ಹಾಕಲಿಲ್ಲ ಮಣೆ

|ಸಹಾಯಕ ಪ್ರಾಧ್ಯಾಪಕರು, ಜೆಎನ್​ಎನ್​ಸಿಇ ಎಂಬಿಎ ವಿಭಾಗ, ಶಿವಮೊಗ್ಗ

2009ರ ಬಜೆಟ್​ನಲ್ಲಿ ಘೊಷಣೆಯಾದ ‘ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮಿಷನ್-2020’ ಸಮಗ್ರ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಬಜೆಟ್​ನಲ್ಲೂ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ, ಮಾನವ ಸಂಪನ್ಮೂಲ, ಪಂಚಾಯತ್​ರಾಜ್ ಅಭಿವೃದ್ಧಿ, ಕು ಡಿಯುವ ನೀರಿನ ಯೋಜನೆಯ ರೂಪುರೇಷೆಗಳನ್ನೊಳಗೊಂಡ ಮಿಷನ್-2020ಕ್ಕೆ ಈ ಬಜೆಟ್​ನಿಂದ ಹಿನ್ನಡೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಜನಪ್ರಿಯ ಬಜೆಟ್​ಗೆ ಒತ್ತು ನೀಡುತ್ತಿರುವ ಕಾರಣ ದೂರಗಾಮಿ ಯೋಜನೆಗಳಿಗೆ ಬಲ ಸಿಗುತ್ತಿಲ್ಲ. ಇದ್ದುದರಲ್ಲಿ ಸಮಾಧಾನಪಡಬಹುದಾದ ಅಂಶಗಳೆಂದರೆ, ನಾಲ್ಕನೇ ಹಣಕಾಸು ಆಯೋಗದ ವರದಿಯನ್ನು ಅನುಷ್ಠಾನಕ್ಕೆ ಕ್ರಮ ಕೈಗೊಂಡಿರುವುದು ಹಾಗೂ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ 53 ಸಾವಿರ ಕೋಟಿ ರೂ. ಅನುದಾನ ನಿಗದಿಪಡಿಸಿರುವುದು. ಬಜೆಟ್​ನಲ್ಲಿ ಘೊಷಿಸಿರುವ ಈ ಅಂಶಗಳಿಂದ 2022-23ರ ವೇಳೆಗೆ ಸ್ಥಳೀಯ ಸಂಸ್ಥೆಗಳ ಪಾಲು ಶೇ.42ರಿಂದ 48ಕ್ಕೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಕುಡಿಯುವ ನೀರಿನ ಶಾಶ್ವತ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆಗಳಿವೆ. ಸಾಲ ಮನ್ನಾ ಘೊಷಣೆಯೂ ಸೇರಿ ಬಹುತೇಕ ಜನಪ್ರಿಯ ಯೋಜನೆಗಳು ತಾತ್ಕಾಲಿಕ ಖುಷಿ ನೀಡಬಹುದೇ ಹೊರತು ಶಾಶ್ವತ ಪರಿಹಾರ ಒದಗಿಸುವುದಿಲ್ಲ. ‘ಇದು ಒಂದು ರೀತಿಯಲ್ಲಿ ಗಾಯಕ್ಕೆ ಮುಲಾಮು ಹಚ್ಚಿದಂತೆ’ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ರಾಜ್ಯದ ಜನಸಂಖ್ಯೆಯ ಶೇ.54.8ರಷ್ಟು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ನಗರಕ್ಕೆ ವಲಸೆ ಹೋಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದ ಜನಸಂಖ್ಯೆ 1961ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆಯ ಶೇ.77.7 ಆಗಿತ್ತು. ಆದರೆ 2011ರ ಜನಗಣತಿ ಪ್ರಕಾರ ಈ ಪ್ರಮಾಣ ಶೇ.61.43ಕ್ಕೆ ಕುಸಿದಿದೆ. ಗ್ರಾಮೀಣಾಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡದ ನೇರ ಪರಿಣಾಮವಿದು. ಗ್ರಾಮೀಣ ವಸತಿ ಯೋಜನೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಭಾಗದಲ್ಲಿ ಮಾನವ ಸಂಪನ್ಮೂಲ ಹಾಗೂ ಉದ್ಯೋಗ ಸೃಷ್ಟಿ ಬಗ್ಗೆ ಬಜೆಟ್​ನಲ್ಲಿ ಸರಿಯಾದ ಯೋಜನೆ ರೂಪಿಸಿಲ್ಲ.


ಆರ್ಥಿಕ ಶಿಸ್ತಿಗೆ ಚೌಕಟ್ಟು

ಬೆಂಗಳೂರು: ಅತಿ ಭಾರದ ಸಾಲಮನ್ನಾ ತೀರ್ಮಾನ ಮಾಡಿದ ಎಚ್.ಡಿ. ಕುಮಾರಸ್ವಾಮಿ ಸರ್ಕಾರವು ಹಣಕಾಸು ಇತಿಮಿತಿಗಳ ಮೇಲೆ ನಿಗಾ ಇಟ್ಟು ಚೌಕಟ್ಟು ಹಾಕಿಕೊಳ್ಳಲು ಮುಂದಾಗಿದೆ.

  1. ಇಲಾಖೆಗಳಲ್ಲಿ ವೆಚ್ಚಕ್ಕೆ ಕಡಿವಾಣ, ಕೇಂದ್ರದತ್ತ ನೆರವಿಗೆ ಮೊರೆ ಇಡುವುದು, ಅಬಕಾರಿಯಲ್ಲಿ ಸೋರಿಕೆ ತಡೆಯಲು ಕ್ಯೂ ಆರ್ ಕೋಡ್​ನಂತಹ ಕ್ರಮಕೈಗೊಳ್ಳಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಜತೆಗೆ ಬೇಕಾಬಿಟ್ಟಿ ನೇಮಕಕ್ಕೂ ಕಡಿವಾಣ ಹಾಕಲು ಸೂಚನೆ ನೀಡಲಾಗಿದೆ.
  2. ಪರಿಣಾಮಕಾರಿ ವೆಚ್ಚ ಸುಧಾರಿಸಲು ಎಲ್ಲ ಆಡಳಿತಾತ್ಮಕ ಇಲಾಖೆಗಳು ಒಂದು ಕಾಲಮಿತಿಯುಳ್ಳ ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ಸಲಹೆ ನೀಡಲಾಗಿದ್ದು, ವೆಚ್ಚ ಕಡಿತ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ವೆಚ್ಚ ಸುಧಾರಣೆಗಿರುವ ಅವಕಾಶಗಳ ಬಗ್ಗೆ ಪ್ರಮುಖ ಇಲಾಖೆಗಳು ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸುವುದು ಹಾಗೂ ಪಾಲಿಸುವ ಮೂಲಕ ವೆಚ್ಚ ನಿಯಂತ್ರಿಸಬೇಕಾಗುತ್ತದೆ.
  3. ಅಬಕಾರಿ ಇಲಾಖೆಯ ಸೋರಿಕೆ ತಡೆಯಲು ಬಾರ್ ಕೋಡ್ ಮತ್ತು ಕ್ಯೂ ಆರ್ ಕೋಡ್ ಉಪಯೋಗಿಸಲು ಸೂಚಿಸಲಾಗಿದೆ. ಆದಾಯ ತೆರಿಗೆ ಪರಾಮರ್ಶೆ ವೇಳೆ ಸೋರಿಕೆ ಗಮನಿಸಿರುವ ಸರ್ಕಾರ ಈ ಬಗ್ಗೆ ಅಬಕಾರಿ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದೆ. ಈ ಪದ್ಧತಿ ಜಾರಿಗೆ ಬಂದರೆ ತೆರಿಗೆ ರಹಿತವಾಗಿ ಮಾರಾಟವಾಗುವ ಅಬಕಾರಿ ಉತ್ಪನ್ನವನ್ನು ಸುಲಭವಾಗಿ ಪತ್ತೆ ಮಾಡಿ, ಸೋರಿಕೆ ತಡೆಯಬಹುದು ಎಂಬುದು ಉದ್ದೇಶ.
  4. ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಕೇಂದ್ರ ಸರ್ಕಾರದಿಂದ ಜಮೆಗಳಲ್ಲಿ ಇಳಿಕೆ ಪ್ರವೃತ್ತಿ ಕಂಡಿದ್ದು, ಇದು ರಾಜ್ಯದ ಪಾಲಿಗೆ ಕಳವಳಕಾರಿ. ಕೃಷಿವಿಕಾಸ ಯೋಜನೆ, ನರೇಗಾ, ಮಾಧ್ಯಮ ಶಿಕ್ಷಾ ಅಭಿಯಾನ ಮುಂತಾದ ಯೋಜನೆಗಳಲ್ಲಿ ರಾಜ್ಯದ ಅಂದಾಜಿನ ಅರ್ಧಕ್ಕಿಂತ ಕಡಿಮೆ ಜಮೆಗಳನ್ನು ಕೇಂದ್ರದಿಂದ ಸ್ವೀಕರಿಸಿದೆ. ಹೀಗಾಗಿ ರಾಜ್ಯ ಸರ್ಕಾರದ ಯೋಜನೆಯ ಬದ್ಧತೆಗಳನ್ನು ಈಡೇರಿಸಲು ಸ್ವಂತ ಸಂಪನ್ಮೂಲಗಳಿಂದ ಹೆಚ್ಚುವರಿ ಹಣವನ್ನು ಖರ್ಚು ಮಾಡುವಂತಾಗಿದೆ. ಆಡಳಿತಾತ್ಮಕ ಇಲಾಖೆಗಳು ಈ ಬಗ್ಗೆ ಕೇಂದ್ರದೊಂದಿಗೆ ವ್ಯವಹರಿಸಿ ವಿಷಯ ಪ್ರಸ್ತಾಪಿಸುವಂತೆ ಸೂಚಿಸಲಾಗಿದೆ.
  5. ಜಿಎಸ್​ಟಿ ಸಂಗ್ರಹಗಳ ಅನಿಶ್ಚಿತತೆ ಕಾರಣದಿಂದ 2017-18ರ 2ನೇ ತ್ರೖೆಮಾಸಿಕದ ಕೊನೆಯ ವಾರದಲ್ಲಿ ಮುಕ್ತ ಮಾರುಕಟ್ಟೆ ಸಾಲಗಳನ್ನು ಪಡೆದಿರುವ ಅಗತ್ಯತೆಯನ್ನು ಗಮನಿಸಲಾಗಿದ್ದು, 2018-19ರಲ್ಲಿನ ವಾಸ್ತವಿಕ ಹಣದ ಹರಿವಿಗೆ ಅನುಸಾರವಾಗಿ 2ನೇ ತ್ರೖೆಮಾಸಿಕಗಳಲ್ಲಿಯೇ ಸಾಲ ಪಡೆಯಲು ಉದ್ದೇಶಿಸಲಾಗಿದೆ.
  6. ಎಲ್ಲ ಇಲಾಖೆಗಳು ತೆರಿಗೆಯೇತರ ರಾಜಸ್ವ ಸ್ವೀಕೃತಿಗಳ ದರ ಪರಿಷ್ಕರಣೆ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸಲಹೆ ನೀಡಲಾಗಿದೆ. ಇದಲ್ಲದೆ ಸಮಿತಿಯು ಗಣಿ ಮತ್ತು ಖನಿಜಗಳ ಆದಾಯವನ್ನು ಹರಾಜಿನ ಮೂಲಕ ಹೆಚ್ಚಿಸಲು ಪ್ರಾಮುಖ್ಯತೆ ನೀಡಲು ಹಾಗೂ ಗಣಿಗಳನ್ನು ಶೀಘ್ರವಾಗಿ ಹಂಚಿಕೆ ಮಾಡಲು ಸೂಚಿಸಲಾಗಿದೆ.
  7. ಸರ್ಕಾರಿ ವ್ಯವಸ್ಥೆಯಲ್ಲಿರುವ ಮಾನವ ಸಂಪನ್ಮೂಲವನ್ನು ತರ್ಕಬದ್ಧಗೊಳಿಸಲು (ಸೂಕ್ತ ರೀತಿಯಲ್ಲಿ) 6ನೇ ವೇತನ ಆಯೋಗವು ಶಿಫಾರಸು ಮಾಡಿದೆ. ಇದರ ಅನುಷ್ಠನ, ಬೇಕಾಬಿಟ್ಟಿ ನೇಮಕಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.
  8. ಸಹಾಯಧನದ ನೇರ ವರ್ಗಾವಣೆಯನ್ನು ಆಧಾರ್​ನೊಂದಿಗೆ ಸಕ್ರಿಯಗೊಳಿಸಲು ಆಧಾರ್ ಅಧಿನಿಯಮ ಅನುಸಾರ ಪ್ರಯತ್ನಿಸಬೇಕು. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಇಲಾಖೆಗಳಿಗೆ ಸೂಚಿಸಲಾಗಿದೆ.

ಲೋಕಸಭಾ ಚುನಾವಣೆ ದೃಷ್ಟಿಯ ಆಯವ್ಯಯ

ಡಾ. ಟಿ.ಎಸ್.ಸೋಮಶೇಖರ್ ಅರ್ಥಶಾಸ್ತ್ರ ಪ್ರಾಧ್ಯಾಪಕರು, ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು

ರಾಜಕೀಯ ಅಸ್ಥಿರತೆ ಹಾಗೂ ಮುಂದಿನ ವರ್ಷದ ಲೋಕಸಭೆ ಚುನಾವಣೆಯಿಂದ ಈ ಬಜೆಟ್ ಪ್ರಭಾವಿತಗೊಂಡಂತೆ ಕಾಣುತ್ತಿದೆ. ಅನೇಕ ಹೊಸ ಯೋಜನೆಗಳನ್ನು ಘೋಷಿಸಲಾಗಿದ್ದು, ಬಹುತೇಕ ಜೆಡಿಎಸ್ ಬಿಗಿ ಹಿಡಿತದಲ್ಲಿರುವ ಪ್ರದೇಶಗಳಲ್ಲೇ ಕೇಂದ್ರೀಕೃತವಾಗಿವೆ. ಅನೇಕ ವರ್ಷಗಳಿಂದ ಅಧಿಕಾರವು ಪಕ್ಷದಿಂದ ವಂಚಿತವಾಗಿದ್ದು ಹಾಗೂ ಸರ್ಕಾರದಲ್ಲಿ ಅಸ್ಥಿರತೆ ಮೂಡಿಸುವ ಇತ್ತೀಚೆಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆದಷ್ಟೂ ತ್ವರಿತವಾಗಿ ಈ ಪ್ರದೇಶಗಳಲ್ಲಿ ಯೋಜನೆಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಆತುರದಲ್ಲಿದ್ದಾರೆ. ಅನೇಕ ದಿನಗಳಿಂದ ಚರ್ಚೆಯಾಗುತ್ತಿದ್ದ ಕೃಷಿ ಸಾಲ ಮನ್ನಾ ನಿರೀಕ್ಷೆಯಂತೆಯೇ ಘೋಷಣೆಯಾಗಿದೆ. ಆದರೆ ಸಂಘಟಿತ ವಲಯದಿಂದ ಸಾಲ ಪಡೆದವರಿಗಷ್ಟೇ ಇದು ಪ್ರಯೋಜನವಾಗಲಿದೆ. ಆದರೆ ಅಂಕಿ-ಅಂಶಗಳ ಪ್ರಕಾರ ಶೇ.50ರಷ್ಟಿರುವ ಸಣ್ಣ ಮತ್ತು ಅತಿಸಣ್ಣ ರೈತರು ಅಸಂಘಟಿತ ವಲಯದಿಂದಲೇ ಸಾಲ ಪಡೆದಿದ್ದಾರೆ. ಅಸಂಘಟಿತ ವಲಯದ ಸಾಲವನ್ನು ಸಂಘಟಿತ ವಲಯಕ್ಕೆ ಪರಿವರ್ತಿಸುವ ‘ಸಾಲ ಸ್ಥಳಾಂತರ’ ಯೋಜನೆಯಿಂದ ಈ ರೈತರನ್ನೂ ಒಳಗೊಳ್ಳಲು ಬಹುಶಃ ಸಾಧ್ಯವಿತ್ತು. ಸಾಲ ಮನ್ನಾದಂತಹ ಕ್ರಿಯೆಗಳು ಮತ್ತೆ ಅಗತ್ಯವಾಗುವಂತೆ ಮಾಡುತ್ತವೆ. 2012ರಿಂದ ರಾಜ್ಯದ ಬಂಡವಾಳದ ಗಾತ್ರ ಕುಗ್ಗುತ್ತಿದ್ದು, ಇದು ಒಳ್ಳೆಯ ಲಕ್ಷಣವಲ್ಲ. ಸಾಲ ಮನ್ನಾ ಪ್ರಕ್ರಿಯೆಯು ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಯಿಂದ ದೂರ ಉಳಿಯುವ ಮನಸ್ಥಿತಿಯನ್ನು ಅನೇಕರ ಮನಸ್ಸಿನಲ್ಲಿ ಮೂಡಿಸುತ್ತದೆ. ಜಿಡಿಪಿ ಹೋಲಿಕೆಯಲ್ಲಿ ರಾಜ್ಯದ ಸಾಲದ ಪ್ರಮಾಣ ಹಾಗೂ ಸಾಲಕ್ಕೆ ಪಾವತಿಸುವ ಬಡ್ಡಿ ಪ್ರಮಾಣವೂ ಇದರಿಂದ ಹೆಚ್ಚಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಬಂಡವಾಳ ವೆಚ್ಚದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ಹಾಗೂ ಡೊನಾಲ್ಡ್ ಟ್ರಂಪ್ ಉದ್ಯಮ ನೀತಿಯ ಕಾರಣಕ್ಕೆ ನಡೆಯುತ್ತಿರುವ ವ್ಯಾಪಾರ ಸಮರವನ್ನು ಸರ್ಕಾರ ಗಮನದಲ್ಲಿರಿಸಿಕೊಳ್ಳಬೇಕು. ಸದೃಢವಾದ ತಂತ್ರಜ್ಞಾನಾಧಾರಿತ ನೀತಿಯನ್ನು ಸರ್ಕಾರ ಅಳವಡಿಸಿಕೊಳ್ಳಬೇಕಿದ್ದು, ಸಾಧ್ಯವಿರುವಡೆ ಗುತ್ತಿಗೆ ಕೃಷಿಯನ್ನು ಉತ್ತೇಜಿಸಬೇಕು. ನಿಯಂತ್ರಣಕ್ಕೆ ಒಳಪಟ್ಟ ಗುತ್ತಿಗೆ ಕೃಷಿಯು ಉತ್ತಮ ಕಾರ್ಯಕ್ರಮಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಲು ಸಾಧ್ಯವಿದೆ. ಉತ್ತಮ ಬೀಜ-ಗೊಬ್ಬರ ಹಾಗೂ ನಿಶ್ಚಿತ ದರ ರೈತರಿಗೆ ದೊರಕಬಹುದು. ಇಸ್ರೇಲ್ ಮಾದರಿ ಕೃಷಿ ಮೂಲಕ ಸರ್ಕಾರ ಸೂಕ್ತ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದೆ. ಆದರೆ ಅತ್ಯಧಿಕ ಪ್ರಮಾಣದಲ್ಲಿ ಉನ್ನತ ತಂತ್ರಜ್ಞಾನದ ಬಳಕೆ ಮೂಲಕ ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಉತ್ಪಾದನೆ ಹೆಚ್ಚಳದ ಕಡೆ ಗಮನ ನೀಡಬೇಕು. ಉದಾಹರಣೆಗೆ ಜಪಾನ್ ಡೇರಿಗಳಲ್ಲಿ ಹಸುಗಳ ಕಾಲಿಗೆ ಸೆನ್ಸರ್ ಅಳವಡಿಸಿ ಫಲವತ್ತತೆ ಅವಧಿ ತಿಳಿಯುವ ಹಾಗೂ ಹಾಲು ಉತ್ಪಾದನೆ ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ. ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ನಾವು ಹಿಂಜರಿದರೆ ಭವಿಷ್ಯದಲ್ಲೂ ರೈತರ ಸಂಕಷ್ಟ ಹಾಗೂ ಸಾಲ ಮನ್ನಾದಂತಹ ವಿಷ ಚಕ್ರ ಮುಂದುವರಿಯಲಿದೆ.

Leave a Reply

Your email address will not be published. Required fields are marked *

Back To Top