ರಾಷ್ಟ್ರ ಮಟ್ಟದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಮಾತಾಡುವ ಬಿಜೆಪಿ ಕರ್ನಾಟಕದಲ್ಲಿ ಕುದುರೆ ವ್ಯಾಪಾರಕ್ಕಿಳಿದಿದೆ

ಕೋಲ್ಕತಾ: ರಾಷ್ಟ್ರ ಮಟ್ಟದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮಾತನಾಡುವ ಬಿಜೆಪಿಯು ಕರ್ನಾಟಕದಲ್ಲಿ ಕುದುರೆ ವ್ಯಾಪಾರಕ್ಕಿಳಿದಿದೆ. ಈ ಮೂಲಕ ಬಿಜೆಪಿಯ ದ್ವಂದ್ವ ನಡೆ ಜಗಜ್ಜಾಹೀರಾಗಿದೆ ಎಂದು ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿಯೇತರ ಪಕ್ಷಗಳ, ಮಹಾಘಟಬಂಧನದ ಭಾಗಿದಾರ ಪಕ್ಷಗಳ ‘ಒಕ್ಕೂಟ ಭಾರತ’ ಸಮಾವೇಶದಲ್ಲಿ ಈ ವಿಚಾರವನ್ನು ಎಚ್​.ಡಿ ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ್ದಾರೆ. ” ರಾಜೀನಾಮೆ ನೀಡಿ ತಮ್ಮ ಪಕ್ಷ ಸೇರುವಂತೆ ಬಿಜೆಪಿಯು ಜೆಡಿಎಸ್​ ಮತ್ತು ಕಾಂಗ್ರೆಸ್​ ಶಾಸಕರ ಮೇಲೆ ಒತ್ತಡ ಹೇರುತ್ತಿದೆ. ದೊಡ್ಡ ಪ್ರಮಾಣದ ಹಣದ ಆಮಿಷ ಒಡ್ಡುತ್ತಿದೆ. ಕರ್ನಾಟಕದಲ್ಲಿ ಶಾಸಕರು ವಸ್ತುಗಳಂತಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಬಹುದೊಡ್ಡ ಅಣಕವೇ ಸರಿ,” ಎಂದು ಕುಮಾರಸ್ವಾಮಿ ಅವರು ಬಿಜೆಪಿಯ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ, ಇತ್ತ ಕರ್ನಾಟದಲ್ಲಿ ಅವರ ಪಕ್ಷ ಕುದುರೆ ವ್ಯಾಪಾರ ಮಾಡುತ್ತಿದೆ. ಈ ಮೂಲಕ ಬಿಜೆಪಿಯ ದ್ವಂದ್ವ ನಡೆ ಬಹಿರಂಗವಾಗಿದೆ ಎಂದು ಅವರು ಕಿಡಿಕಾರಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ವಿರುದ್ಧ ಪ್ರತಿಪಕ್ಷಗಳು ಗಟ್ಟಿಯಾದ ಮೈತ್ರಿಯೊಂದನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಎಚ್​.ಡಿ ಕುಮಾರಸ್ವಾಮಿ ಇದೇ ವೇಳೆ ಪ್ರತಿಪಾದಿಸಿದರು.