ಕುಮಾರಸ್ವಾಮಿ ವಿರುದ್ಧ ರಾಷ್ಟ್ರಪತಿಗೆ ದೂರು

ಅಣ್ಣಾ ಫೌಂಡೇಶನ್ ಅಧ್ಯಕ್ಷ ಹೇಳಿಕೆ | ಯೋಧರ ವಿರುದ್ಧ ಹೇಳಿಕೆ ಖಂಡನೀಯ

ಬಳ್ಳಾರಿ: ಯೋಧರು ದೇಶ ಕಾಯದಿದ್ದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡು ಮನೆ ಹಾಗೂ ಅವರ ಕುಟುಂಬದ 10 ಜನರು ರಾಜಕೀಯ ಮಾಡಲು ಸಾಧ್ಯವಿರಲಿಲ್ಲ ಎಂದು ಅಣ್ಣಾ ಫೌಂಡೇಶನ್ ಮುಖ್ಯಸ್ಥ ರಾಜಶೇಖರ ಮುಲಾಲಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಟೀಕಿಸುವ ಮೂಲಕ ಸಿಎಂ ಕುಮಾರಸ್ವಾಮಿ ಯೋಧರ ಕರ್ತವ್ಯ ಹಾಗೂ ಬದ್ಧತೆಯನ್ನು ಹಿಯಾಳಿಸಿದ್ದಾರೆ. ಕುಮಾರಸ್ವಾಮಿ ಹೇಳಿಕೆ ಖಂಡನೀಯ. ಚುನಾವಣೆಯಲ್ಲಿ ಪುತ್ರ ಸೋಲುವ ಭೀತಿಯಿಂದ ಮಾನಸಿಕವಾಗಿ ಮನನೊಂದು ಯೋಧರ ಬಗ್ಗೆ ಮಾತನಾಡಿರಬಹುದು. ಈ ಹಿನ್ನೆಲೆಯಲ್ಲಿ ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆದರೆ ಒಳಿತು ಎಂದು ಲೇವಡಿ ಮಾಡಿದರು.

ಸಿಎಂ ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗ ಹಾಗೂ ರಾಷ್ಟ್ರಪತಿಗೆ ಈ ಮೇಲ್ ಮೂಲಕ ದೂರು ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿಗೆ ಹಾಸನ, ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳೇ ಮುಖ್ಯವಾಗಿವೆ. ಅಭಿವೃದ್ಧಿ ಸೇರಿ ಬೇರೆ ಯಾವ ವಿಚಾರಗಳೂ ಮುಖ್ಯಮಂತ್ರಿಗೆ ಬೇಕಾಗಿಲ್ಲ. ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಯಾರೂ ಅರ್ಹರಿಲ್ಲದಂತಾಗಿದೆ. ಇದರಿಂದಾಗಿ ಎರಡೂ ಪಕ್ಷದವರು ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಈ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳು ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ವಾಯುಸೇನೆಯ ನಿವೃತ್ತ ಅಧಿಕಾರಿ ಪ್ರಸನ್ನಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಒನ್ ರ‌್ಯಾಂಕ್ ಒನ್ ಪೆನ್ಷನ್ ಯೋಜನೆ ಜಾರಿಗೊಳಿಸಿದ್ದಾರೆ. ಯೋಧರಿಗೆ ಬುಲೆಟ್ ಪ್ರೂಫ್ ಜಾಕೇಟ್ ನೀಡಿದ್ದಾರೆ. ಮೋದಿ ಯೋಧರಿಗಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಕೀಳುಮಟ್ಟದ ಹೇಳಿಕೆಯನ್ನು ಖಂಡಿಸುತ್ತೇವೆ. ತಮ್ಮ ಹೇಳಿಕೆಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ದೇಶದ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಯೋಧರ ಕುರಿತು ಹೇಳಿಕೆ ಬಗ್ಗೆ ಕುಮಾರಸ್ವಾಮಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮಾಜಿ ಸೈನಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಪಂಪಾಪತಿ, ರಾಮಕೃಷ್ಣ, ಕುಮಾರಸ್ವಾಮಿ, ಸತ್ಯನಾರಾಯಣ, ಗಂಗಾವತಿ ವೀರೇಶ್, ಟಿ.ರಂಜಾನ್ ಸಾಬ್ ಇತರರು ಇದ್ದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯೋಧರ ಕುರಿತು ನೀಡಿದ ಹೇಳಿಕೆ ಅಚ್ಚರಿ ಮೂಡಿಸಿದೆ. ಯೋಧರು, ರೈತರ ಬಗ್ಗೆ ಹೇಳಿಕೆ ನೀಡುವಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ವಹಿಸಬೇಕು.
| ಪುರುಷೋತ್ತಮಗೌಡ ದರೂರು ತುಂಗಭದ್ರಾ ರೈತಸಂಘದ ಅಧ್ಯಕ್ಷ