ಮತ್ತೆ ಮೋದಿ ಪ್ರಧಾನಿ ಅಸಾಧ್ಯ

>

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಮೋದಿ ಎಂಬ ಮೋಡಿಗೆ ಒಳಗಾಗಿ ಮತದಾನ ಮಾಡಬೇಡಿ. ಮತ್ತೆ ಮೋದಿ ದೇಶದ ಪ್ರಧಾನಿಯಾಗಲು ಸಾಧ್ಯವೇ ಇಲ್ಲ. 5 ವರ್ಷಗಳ ಹಿಂದೆ ಅವರು ನೀಡಿದ ಆಶ್ವಾಸನೆಗಳು ಕಾರ‌್ಯರೂಪಕ್ಕೆ ಬಾರದಿರುವುದೇ ಇದಕ್ಕೆ ಕಾರಣ. ಈ ಬಾರಿ ಹಿಂದಿನಂತೆ ಮೋದಿ ಬಗ್ಗೆ ಜನತೆಯಲ್ಲಿ ನಿರೀಕ್ಷೆಗಳಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಕುಂದಾಪುರದ ನೆಹರು ಮೈದಾನದಲ್ಲಿ ಬುಧವಾರ ಸಾಯಂಕಾಲ ಆಯೋಜಿಸಲಾದ ಮೀನುಗಾರರ ಸಮಾವೇಶ ಮತ್ತು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ಮೈತ್ರಿ ಸರ್ಕಾರ 9 ತಿಂಗಳಲ್ಲಿ ಹಲವಾರು ಬಡವರ ಪರ ಯೋಜನೆಗಳನ್ನು ಜಾರಿಗೆ ತಂದು, ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಆದರೆ ಕೇಂದ್ರ ಸರ್ಕಾರ ಹೆಸರಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕಾರ್ಪೋರೆಟ್ ವಲಯ ಪರವಾಗಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಯು.ಆರ್.ಸಭಾಪತಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಜೆಡಿಎಸ್‌ನ ಉಡುಪಿ ಜಿಲ್ಲಾ ಮಟ್ಟದ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಕರಾವಳಿಯಲ್ಲಿ ಗ್ರಾಮ ವಾಸ್ತವ್ಯ:  ಮೀನುಗಾರರ ಸಮಸ್ಯೆಗಳ ಬಗ್ಗೆ ತಿಳಿಯಲು ಲೋಕಸಭಾ ಚುನಾವಣೆ ಬಳಿಕ ಕರಾವಳಿಯಲ್ಲಿ ಒಂದು ದಿನ ಗ್ರಾಮ ವಾಸ್ತವ್ಯ ಮಾಡಿ, ಮೀನುಗಾರ ಮುಖಂಡರೊಂದಿಗೆ ಚರ್ಚೆ ನಡೆಸುತ್ತೇನೆ. ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಕೃಷಿಯಂತೆ ಮೀನುಗಾರಿಕೆ ಪರಿಗಣನೆ: ಮೀನುಗಾರಿಕೆಯನ್ನು ಕೃಷಿಯಂತೆ ಪರಿಗಣಿಸಿ, ಕೃಷಿಕರಿಗೆ ಸಿಗುವ ಎಲ್ಲ ಸವಲತ್ತುಗಳು ಮೀನುಗಾರರಿಗೂ ದೊರಕುವಂತೆ ಮಾಡಲಾಗುವುದು. ರಾಜ್ಯ ಸರ್ಕಾರದಿಂದ ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಶೀಘ್ರ ಯೋಜನೆ ರೂಪಿಸಲಾಗುವುದು ಎಂದು ಸಿಎಂ ಹೇಳಿದರು.

ಕೋಮು ಸಂಘರ್ಷಕ್ಕೆ ಕಡಿವಾಣ:  ಮೈತ್ರಿ ಸರ್ಕಾರ ಆಡಳಿತವಧಿಯಲ್ಲಿ ಕರಾವಳಿಯಲ್ಲಿ ಕೋಮು ಸೌಹಾರ್ದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಸರ್ಕಾರ ಯಶಸ್ವಿಯಾಗಿದೆ. ಕರಾವಳಿ ಭಾಗದ ಉಡುಪಿ ಮತ್ತು ಕಾರವಾರದಲ್ಲಿ ಬಿಜೆಪಿ ಬಲ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ದೇಶದಲ್ಲೇ ಪ್ರಥಮ ಪ್ರಯತ್ನ ಎಂಬಂತೆ ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆಸುತ್ತಿದ್ದಾರೆ. ಅವರಿಗೆ ಪ್ರಜ್ಞಾವಂತ ಮತದಾರರು ಬೆಂಬಲಿಸಬೇಕು ಎಂದರು.

ತಡವಾದ ಕಾರ್ಯಕ್ರಮ:  5 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಶುರುವಾದದ್ದು ರಾತ್ರಿ 7ಕ್ಕೆ. ಸಾಯಂಕಾಲದಿಂದಲೇ ಸಿಎಂ ಬರುವಿಕೆಗೆ ಕಾಯುತ್ತಿದ್ದ ಕೆಲ ಕಾರ್ಯಕರ್ತರು ರಾತ್ರಿಯಾಗುತ್ತಿದ್ದಂತೆ ನಿರಾಶೆಗೊಂಡು ತೆರಳಿದರು. ಕಾರ್ಯಕ್ರಮಕ್ಕೆ ತಡವಾದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕೇಂದ್ರ ಸರ್ಕಾರ ಹೆಲಿಕಾಪ್ಟರ್ ಸೌಲಭ್ಯಕ್ಕೆ ಅನುಮತಿ ನೀಡದೆ ಸತಾಯಿಸಿತು. ಆದ್ದರಿಂದ ರಸ್ತೆ ಮೂಲಕ ಶಿವಮೊಗ್ಗ ಮಾರ್ಗವಾಗಿ ಆಗಮಿಸಿದ್ದರಿಂದ ತಡವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.