ಚಾರಣ ತೆರಳಿದ್ದ ಯುವಕ ನಾಪತ್ತೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತಕ್ಕೆ ಚಾರಣಕ್ಕೆ ಆಗಮಿಸಿದ್ದ ಬೆಂಗಳೂರಿನ ಗಾಯತ್ರಿ ನಗರದ ನಿವಾಸಿ ಅಂಜನಮೂರ್ತಿ ಅವರ ಪುತ್ರ ಸಂತೋಷ್(25) ನಾಪತ್ತೆಯಾಗಿದ್ದಾರೆ.

ಬೆಂಗಳೂರಿನ ಗಾಯತ್ರಿ ನಗರದ ನಿವಾಸಿ ಅಂಜನಮೂರ್ತಿ ಎಂಬುವರ ಪುತ್ರ ಸಂತೋಷ್(25) ನಾಪತ್ತೆಯಾದ ಚಾರಣಿಗ. ಬೆಂಗಳೂರು ಮೂಲದ 12 ಯುವಕರ ತಂಡ ಶನಿವಾರ ಬೆಳಗ್ಗೆ 7 ಗಂಟೆಗೆ ಸುಬ್ರಹ್ಮಣ್ಯಕ್ಕೆ ಬಂದಿದ್ದಾರೆ. ಬಳಿಕ ದೇವರಗದ್ದೆ ಕಡೆಯಿಂದ ಪರ್ವತಾರೋಹಣ ಆರಂಭಿಸಿದ್ದಾರೆ. ಕುಮಾರಪರ್ವತ ಚಾರಣ ಮಾಡಲು ಅರಣ್ಯ ಇಲಾಖೆಯಲ್ಲಿ ಅನುಮತಿ ಪಡೆದು ತೆರಳಿದ್ದಾರೆ. ಅಂದು ರಾತ್ರಿ ಗಿರಿಗದ್ದೆಯಲ್ಲೇ ಉಳಿದು ಭಾನುವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ಶೇಷ ಪರ್ವತ ಎಂಬಲ್ಲಿಗೆ ತಲುಪಿ ಅಲ್ಲಿಂದ ಮತ್ತೆ ಗಿರಿಗದ್ದೆಗೆ ಬಂದಿಳಿದಿದ್ದಾರೆ. ನಂತರ ಊಟ ಮುಗಿಸಿ ಸುಬ್ರಹ್ಮಣ್ಯ ಕಡೆ ಸಾಯಂಕಾಲ ಪ್ರಯಾಣ ಬೆಳೆಸಿದ್ದಾರೆ. 12 ಜನರ ತಂಡ ಎರಡು ಭಾಗವಾಗಿ ತೆರಳಿದ್ದು, 6 ಜನರ ಒಂದು ತಂಡ ಮೊದಲು ತಲುಪಿದೆ. ಸ್ವಲ್ಪ ಹೊತ್ತಿನ ನಂತರ ಗಿರಿಗದ್ದೆ ಮನೆಯಿಂದ ಉಳಿದ ಆರು ಜನರ ತಂಡ ಸುಬ್ರಹ್ಮಣ್ಯ ಕಡೆಗೆ ಬರುವ ವೇಳೆ ಜೋರಾಗಿ ಮಳೆ ಸುರಿಯಲಾರಂಭಿಸಿದೆ. ಆ ವೇಳೆ ಸಂತೋಷ್ ತನ್ನ ಜಾಕೆಟ್‌ನ್ನು ತೆಗೆದು ರೈನ್‌ಕೋಟ್ ಹಾಕಿದ್ದಾರೆ. ಅಲ್ಲಿಯವರೆಗೆ ಸ್ನೇಹಿತರ ಜತೆಗಿದ್ದ ಸಂತೋಷ್ ರೈನ್‌ಕೋಟ್ ಧರಿಸಿ ಬರುತ್ತಿದ್ದ ಸ್ವಲ್ಪ ಹೊತ್ತಿನಲ್ಲೇ ಕಣ್ಮರೆಯಾಗಿದ್ದಾರೆ. ಹುಡುಕಾಡಿದರೂ ಪತ್ತೆಯಾಗಲಿಲ್ಲ ಎಂದು ಜತೆಗಿದ್ದ ದರ್ಶನ್ ಎಂಬುವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಐದು ತಂಡಗಳಿಂದ ಶೋಧ ಕಾರ್ಯ: ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಪೋಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳು ಮಂಗಳವಾರ ಬೆಳಗ್ಗೆ 6ಗಂಟೆಗೆ ಕಾರ್ಯಾಚರಣೆ ಪ್ರಾರಂಭಿಸಲಿವೆ.

Leave a Reply

Your email address will not be published. Required fields are marked *