ದಕ್ಷಿಣ ಕಾಶಿಯಲ್ಲಿ ಪಿಂಡ ಪ್ರದಾನಕ್ಕೂ ಪರದಾಟ

ಶ್ರವಣ್‌ಕುಮಾರ್ ನಾಳ ಪುತ್ತೂರು
ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಉಪ್ಪಿನಂಗಡಿಯ ಕುಮಾರಧಾರಾ-ನೇತ್ರಾವತಿ ನದಿಗಳ ಪವಿತ್ರ ಸಂಗಮ ತಾಣದಲ್ಲಿ ಪಿಂಡ ಪ್ರದಾನಕ್ಕೂ ನೀರಿಲ್ಲದ ಸ್ಥಿತಿ!

ಗಯಾಪದ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರ ಸಮೀಪ ನೇತ್ರಾವತಿ ನದಿ ಬರಿದಾಗಿದೆ. ಇದರ ಒಡಲಿನಲ್ಲಿರುವ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಪವಿತ್ರ ಸಂಗಮ ತಾಣವೂ ನೀರಿಲ್ಲದೆ ಸೊರಗಿದೆ. ಪಿಂಡ ಪ್ರದಾನ ಕಾರ‌್ಯಗಳಿಗೆ ಬರುವ ಭಕ್ತರು ನದಿಯಲ್ಲಿ ನೀರಿಗಾಗಿ ಹುಡುಕಾಟ ನಡೆಸಬೇಕಿದೆ.

ಸಾಮಾನ್ಯವಾಗಿ ಹರಿಯುವ ನೀರಿನಲ್ಲಿ ಪಿಂಡ ಪ್ರದಾನ ಮಾಡಿ ಮಿಂದೆದ್ದು ಹೋಗುವುದು ವಾಡಿಕೆ. ಈ ಹಿಂದೆ ವರ್ಷದ 11ತಿಂಗಳೂ ಕುಮಾರಧಾರಾ-ನೇತ್ರಾವತಿ ನದಿಗಳ ಪವಿತ್ರ ಸಂಗಮ ತಾಣದಲ್ಲಿ ನೀರಿನ ಹರಿವು ಇದ್ದು, ಪಿಂಡ ಪ್ರದಾನ ಕಾರ್ಯಕ್ಕೆ ತೊಂದರೆ ಇರುತ್ತಿರಲಿಲ್ಲ. ಪ್ರಸ್ತುತ ಹರಿಯುವ ನೀರು ಇಲ್ಲ, ನೀರಿನ ಹೊಂಡಗಳೂ ಇಲ್ಲ. ನದಿಯ ಉದ್ದಕ್ಕೂ ಇರುವ ಕಯ(ನೀರಿನ ಹೊಂಡಗಳು) ಬರಿದಾಗಿವೆ. ಇದೀಗ ದೇವಳದಿಂದ ತುಸು ದೂರದಲ್ಲಿ ಇರುವ ಮಹಾಕಾಳಿ ಕಯದಲ್ಲಿ ಮಾತ್ರ ನೀರು ಇದೆ. ಭಕ್ತರು ಈ ಕಯದಲ್ಲಿ ಪಿಂಡ ಪ್ರದಾನ ಮಾಡಿ ಮಿಂದೆದ್ದು ಹೋಗುತ್ತಿದ್ದಾರೆ.

ಮಹಾಕಾಳಿ ಕಯ ಬಳಸಲು ನಿರ್ದೇಶನ
ಪಿಂಡ ಪ್ರದಾನ ಹರಿದು ಹೋಗುವ ನೀರಿನಲ್ಲಿ ಮಾಡಬೇಕು. ಸಂಗಮ ತಾಣದ ಹೊಂಡದಲ್ಲಿ ಸ್ವಲ್ಪ ನೀರಿದೆ. ಹರಿಯುವಿಕೆ ಇಲ್ಲದ ಕಾರಣ ಕಲುಷಿತವಾಗಿದೆ. ಸಂಗಮ ತಾಣದಿಂದ ತುಸು ದೂರದಲ್ಲಿ ನದಿ ಮಧ್ಯೆ ಇರುವ ಮಹಾಕಾಳಿ ಕಯದಲ್ಲಿ ನೀರು ಹರಿಯುತ್ತಿದೆ. ಭಕ್ತರಿಗೆ ಇಲ್ಲಿ ಪಿಂಡ ಪ್ರದಾನ ಮಾಡಲು ಸೂಚಿಸುತ್ತಿದ್ದೇವೆ. ದೇವಳದಲ್ಲಿ ಪೂಜೆ ಇನ್ನಿತರ ಅಗತ್ಯಕ್ಕೆ ಬಾವಿಯ ವ್ಯವಸ್ಥೆ ಇದೆ ಎಂದು ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಕುಮಾರಧಾರಾ-ನೇತ್ರಾವತಿ ನದಿಗಳ ಪವಿತ್ರ ಸಂಗಮ ತಾಣದಲ್ಲಿ ನೀರು ಕಡಿಮೆಯಾದ ನಿದರ್ಶನ ಇಲ್ಲ. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಂಗಮ ತಾಣದ ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ. ನೀರು ಕಡಿಮೆಯಾಗಿದ್ದು, ಕಯದಲ್ಲಿಯೂ ಶುದ್ಧ ನೀರಿಲ್ಲ, ಇದರಿಂದ ದಕ್ಷಿಣಕಾಶಿಯಲ್ಲಿ ಪಿಂಡಪ್ರದಾನಕ್ಕೂ ಪರದಾಡುವಂತಾಗಿದೆ.
ನಾಗರಾಜ್,  ಉಪ್ಪಿನಂಗಡಿ

Leave a Reply

Your email address will not be published. Required fields are marked *